ADVERTISEMENT

ರಾಯಬಾಗ: ‘ದುರ್ಯೋಧನ’ ಸೋಲಿಸಲು ರಣತಂತ್ರ

ಕಾಂಗ್ರೆಸ್‌, ಜನತಾ ಪರಿವಾರ, ಬಿಜೆಪಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟ ರಾಯಬಾಗ ಮತದಾರ

ಸಂತೋಷ ಈ.ಚಿನಗುಡಿ
Published 2 ಏಪ್ರಿಲ್ 2023, 6:59 IST
Last Updated 2 ಏಪ್ರಿಲ್ 2023, 6:59 IST
ದುರ್ಯೋಧನ ಐಹೊಳೆ
ದುರ್ಯೋಧನ ಐಹೊಳೆ   

ರಾಯಬಾಗ: ಕುರು‌ಕ್ಷೇತ್ರದಲ್ಲಿ ದುರ್ಯೋಧನನಿಗೆ ಸೋಲಾಗಿರ ಬಹುದು. ಆದರೆ, ರಾಯಬಾಗ ರಣದಲ್ಲಿ ಮಾತ್ರ ದುರ್ಯೋಧನ ಐಹೊಳೆ ಹ್ಯಾಟ್ರಿಕ್‌ ಗೆಲುವು ಕಂಡಿದ್ದಾರೆ! ಆ ದುರ್ಯೋಧನ ಕೌರವರ ದೊರೆ, ಈ ದುರ್ಯೋಧನ ಜನಪ್ರತಿನಿಧಿ!

ಹೌದು. ದೇಶದಲ್ಲೇ ಅತ್ಯಂತ ವಿಶಿಷ್ಟ ಹೆಸರಿನಿಂದ ಕರೆಯಲ್ಪಡುವವರು ಶಾಸಕ ದುರ್ಯೋಧನ ಐಹೊಳೆ. ಅವರ ತಂದೆ– ತಾಯಿ ದುರ್ಗಾದೇವಿಯ ಭಕ್ತರಾಗಿದ್ದರು. ‘ದು’ ಅಕ್ಷರ ಮೊದಲಾಗಿ ಒಂದು ಹೆಸರು ಇಡಬೇಕು ಎಂದು ಯೋಚಿಸಿದಾಗ, ಅವರಿಗೆ ಹೊಳೆದಿದ್ದೇ ದುರ್ಯೋಧನ ಎಂಬ ಹೆಸರು. ಹೀಗೆಂದು ಅವರು ಕುಟುಂಬದವರು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ. ಶಾಂತ ಸ್ವಭಾವದವರಾದ ದುರ್ಯೋಧನ ಅವರು ಹೆಸರಿಗೆ ತದ್ವಿರುದ್ಧ ಎನ್ನವುದು ಅವರ ಅಭಿಮಾನಿಗಳ ಮಾತು.

ಈ ಬಾರಿ ಕೂಡ ಬಿಜೆಪಿಯಿಂದ ಅವರಿಗೇ ಟಿಕೆಟ್‌ ಸಿಗುವುದು ಖಾತ್ರಿಯಾಗಿದೆ. ಸಾಮಾನ್ಯ ಗುತ್ತಿಗೆದಾರ ಆಗಿದ್ದ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದವರು. ಪರಿಶಿಷ್ಟ ಸಮುದಾಯದ ನಾಯಕರಾಗಿ ಬೆಳೆದ ಅವರನ್ನು ರಾಯಬಾಗದ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಬೆಂಬಲ ಸೂಚಿಸಿದ್ದು ರಮೇಶ ಜಿಗಜಿಣಗಿ.

ADVERTISEMENT

ಕರಗಾಂವ ಏತನೀರಾವರಿ, ಬೆಂಡವಾಡ ಹಾಗೂ ಬಿರನಾಳ ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ರಸ್ತೆ– ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿದ್ದು ದುರ್ಯೋಧನ ಅವರ ಬಹುಮುಖ್ಯ ಕೆಲಸಗಳು. ಇದೇ ಪಟ್ಟಿ ಹಿಡಿದುಕೊಂಡು ಅವರು ಜನರ ಮುಂದೆ ನಿಂತಿದ್ದಾರೆ.

ಈಗ ಅವರಿಗೆ ಬಿಜೆಪಿಯಲ್ಲಿ ಪ್ರತಿಸ್ಪರ್ಧಿ ಯಾರೂ ಇಲ್ಲ. ಹೀಗಾಗಿ, ಟಿಕೆಟ್‌ ಖಾತ್ರಿಯಾಗಿದೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ: ಕಾಂಗ್ರೆಸ್‌ನಲ್ಲಿ ಮಾತ್ರ ಮೂವರು ಟಿಕೆಟ್‌ಗಾಗಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಮೂಲ ಕಾಂಗ್ರೆಸ್ಸಿಗ, ಸಮಾಜ ಸೇವೆ ಮೂಲಕ ಗುರುತಿಸಿಕೊಂಡ ಮಹಾವೀರ ಮೋಹಿತೆ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಆದರೆ, ಮೊದಲ ಪಟ್ಟಿಯಲ್ಲಿ ಅವರಿಗೆ ಟಿಕೆಟ್‌ ನೀಡದಿರುವುದು ಚಿಂತೆ ಮೂಡಿಸಿದೆ. ಆಡಳಿತ ವಿರೋಧ ಅಲೆಯಲ್ಲಿ ಗೆಲ್ಲಬಹುದು ಎಂಬ ಉಮೇದಿನಲ್ಲಿದ್ದಾರೆ.

ಕ್ಷೇತ್ರದ ಹೊಸ ಮುಖ ಶಂಭುಕೃಷ್ಣ ಕಲ್ಲೋಳಿಕರ. ಕಾಂಗ್ರೆಸ್‌ ಆಕಾಂಕ್ಷಿ ಆಗಿದ್ದು, ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಪ್ರದೀಪಕುಮಾರ ಮಾಡಗಿ ಕೂಡ ಪ್ರಬಲ ಆಕಾಂಕ್ಷಿ. ಸದ್ಯ ಮೂವರೂ ತಾವೇ ಅಭ್ಯರ್ಥಿ ಎಂಬ ಮಟ್ಟಿಗೆ ಪ್ರಚಾರ ನಡೆಸಿದ್ದಾರೆ.

ಜೆಡಿಎಸ್‌ ಆಕಾಂಕ್ಷಿ: ಸದ್ಯ ಜೆಡಿಎಸ್‌ನಲ್ಲಿ ಪ್ರದೀಪಕುಮಾರ ಮಾಳಗಿ ಆಕಾಂಕ್ಷಿ ಆಗಿದ್ದಾರೆ. ಎರಡು ಬಾರಿ ಪಕ್ಷೇತರರಾಗಿ, ಒಂದು ಬಾರಿ ಕಾಂಗ್ರೆಸ್‌ನಿಂದ ನಿಂತು ಅವರು ಸೋಲುಂಡಿದ್ದಾರೆ. ಈ ಬಾರಿ ಜೆಡಿಎಸ್‌ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಅವರ ಬೆಂಬಲ ಇವರಿಗಿದೆ ಎನ್ನುವುದು ಕ್ಷೇತ್ರದ ಜನ ನೀಡುವ ಮಾಹಿತಿ.

ಒಡೆದು ಹೋದ ಕ್ಷೇತ್ರ: ಮುಂಚೆ ರಾಯಬಾಗ–1, ರಾಯಬಾಗ–2 ಎಂಬ ದ್ವಿಸದಸ್ಯ ಕ್ಷೇತ್ರವಾಗಿತ್ತು. ಇದನ್ನು ವಿಭಜಿಸಿ ಕುಡಚಿ ಕ್ಷೇತ್ರ ನಿರ್ಮಾಣ ಮಾಡಲಾಯಿತು. ಸದ್ಯ ರಾಯಬಾಗ ವಿಧಾನಸಭಾ ಕ್ಷೇತ್ರದ ಅರ್ಧಭಾಗ ಚಿಕ್ಕೋಡಿ ತಾಲ್ಲೂಕಿಗೆ ಸೇರಿದೆ. ಅಂದರೆ, 31 ಹಳ್ಳಿಗಳು ರಾಯಬಾಗ– 31 ಹಳ್ಳಿಗಳು ಚಿಕ್ಕೋಡಿ ತಾಲ್ಲೂಕಿಗೆ ಒಳಪಟ್ಟಿವೆ.

ಕ್ಷೇತ್ರದಲ್ಲಿ ಲಿಂಗಾಯರ ಸಂಖ್ಯೆಯೇ ದೊಡ್ಡದು. ನಂತರದ ಸ್ಥಾನದಲ್ಲಿ ಕುರುಬರು, ಪರಿಶಿಷ್ಟರು, ಮುಸ್ಲಿಂ, ಜೈನರು ಇದ್ದಾರೆ. ಮೀಸಲು ಕ್ಷೇತ್ರವಾದ್ದರಿಂದ ಪರಿಶಿಷ್ಟರ ಮತಗಳು ಚೆದುರಿಹೋಗುತ್ತವೆ. ಹೀಗಾಗಿ, ಲಿಂಗಾಯತರ ಮತಗಳೇ ನಿರ್ಣಾಯಕ ಎನ್ನುವುದು ಲೆಕ್ಕಾಚಾರ.

ಕಾಂಗ್ರೆಸ್, ಜನತಾ ಪರಿವಾರ ಹಾಗೂ ಬಿಜೆಪಿ ಮೂರೂ ಪಕ್ಷಗಳಿಗೆ ಇಲ್ಲಿನ ಮತದಾರ ಸಮಾನ ಅವಕಾಶ ನೀಡಿದ್ದಾರೆ.

*

ಐಎಎಸ್‌ ನೌಕರಿ ಬಿಟ್ಟು ರಾಜಕೀಯಕ್ಕೆ

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಶಂಭುಕೃಷ್ಣ ಕಲ್ಲೋಳಿಕರ ಅವರು ಐಎಎಸ್‌ ಅಧಿಕಾರಿ ಆಗಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಆಗಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸೇವಾವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದಾರೆ.

ಕಾಂಗ್ರೆಸ್‌ ಮುಖಂಡರೊಂದಿಗೆ ಚರ್ಚಿಸಿ, ಟಿಕೆಟ್‌ ಗಟ್ಟಿ ಮಾಡಿಕೊಂಡಿದ್ದಾರೆ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಮಾತು. ಆರ್ಥಿಕವಾಗಿಯೂ ಬಲ ಹೊಂದಿರುವ ಅವರು ಉನ್ನತ ಶಿಕ್ಷಣ ಪಡೆದವರು. ಕ್ಷೇತ್ರದಲ್ಲಿ ಆರೋಗ್ಯ– ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆ ನೀಡಬಲ್ಲರು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಮತದಾರ.
*
ದೇಶದಲ್ಲೇ ಹೆಸರಾದ ‘ರಾಯಬಾಗ ಹುಲಿ’

ಸ್ವಾತಂತ್ರ್ಯ ಯೋಧರಾಗಿದ್ದ ವಿ.ಎಲ್‌. ಪಾಟೀಲ ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಶಾಸಕ, ಸಚಿವರಾದವರು. ಅತ್ಯಂತ ದಿಟ್ಟ ನಡೆ, ಧಾಡಸಿ ವ್ಯಕ್ತಿತ್ವ, ನಿರ್ಭಿಡೆಯ ವ್ಯವಹಾರಗಳಿಂದಾಗಿ ಅವರು ‘ರಾಯಬಾಗ ಹುಲಿ’ ಎಂದೇ ಖ್ಯಾತಿ ಪಡೆದವರು.

ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗಲೇ ಅವರನ್ನು ಎದುರು ಹಾಕಿಕೊಂಡ ದಿಟ್ಟ ಜನಪ್ರತಿನಿಧಿ. ಮುಂದೆ ಅವರನ್ನು ರಾಜಕೀಯವಾಗಿ ಸೋಲಿಸಬೇಕು ಎಂಬ ಕಾರಣಕ್ಕೆ ರಾಯಬಾಗನ್ನು ಮೀಸಲು ಮಾಡಲಾಯಿತು ಎಂಬ ದೂರುಗಳೂ ಆಗ ಕೇಳಿಬಂದಿದ್ದನ್ನು ಹಿರಿಯರು ಸ್ಮರಿಸುತ್ತಾರೆ.

ಕಾಂಗ್ರೆಸ್‌ ಹಾಗೂ ಜನತಾ ಪಕ್ಷದ ದೊಡ್ಡ ನಾಯಕರಾಗಿದ್ದ ವಿ.ಎಲ್‌.ಪಾಟೀಲ ಅವರ ಬಳಿಕ, ಅವರ ಪುತ್ರರಾದ ವಿವೇಕರಾವ್ (ಒಮ್ಮೆ ವಿಧಾನ ಪರಿಷತ್‌ ಸದಸ್ಯ), ಪ್ರತಾಪರಾವ್‌ (ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ) ಹಾಗೂ ಅಮರಸಿಂಹ ಪಾಟೀಲ (ಮಾಜಿ ಸಂಸದ) ರಾಜಕಾರಣ ಮುಂದುವರಿಸಿದ್ದಾರೆ. ಕುರುಬ ಸಮಾಜದ ಅತ್ಯಂತ ಪ್ರಬಲ ಮನೆತನವಾಗಿದ್ದರಿಂದ 40 ಸಾವಿರಕ್ಕೂ ಹೆಚ್ಚು ಮತಗಳು ಈಗಲೂ ಈ ಕುಟುಂಬದ ಬೆಂಬಲಕ್ಕಿವೆ. ಮೀಸಲು ಕ್ಷೇತ್ರದಲ್ಲಿ ಅವರು ಯಾರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ವಿಶೇಷವೆಂದರೆ ಎಸ್‌.ಬಿ.ಘಾಟಗೆ ಅವರೂ ಇದೇ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾರೆ. ಕ್ಷೇತ್ರ ವಿಂಗಡಣೆ ಆದ ಮೇಲೆ ಕುಡಚಿಗೆ ಹೋದರು.

ವಿ.ಎಲ್‌.ಪಾಟೀಲ, ಘಾಟಗೆ ಹಾಗೂ ದುರ್ಯೋಧನ; ಮೂವರೂ ಹ್ಯಾಟ್ರಿಕ್‌ ಸಾಧಿಸಿದ್ದು ವಿಶೇಷ.
*
ಈವರೆಗೆ ಶಾಸಕರಾದವರು

ವರ್ಷ;ಶಾಸಕ;ಪಕ್ಷ
1957;ವಿ.ಎಲ್‌.ಪಾಟೀಲ;ಪಕ್ಷೇತರ
1962;ಬಿ.ಎಸ್.ಸೌದಾಗರ;ಕಾಂಗ್ರೆಸ್‌
1967;ವಿ.ಎಲ್‌.ಪಾಟೀಲ;ಕಾಂಗ್ರೆಸ್‌
1972;ವಿ.ಎಲ್‌.ಪಾಟೀಲ;ಕಾಂಗ್ರೆಸ್‌
1978;ಆರ್‌.ಎಸ್.ನಡೋಣಿ;ಜನತಾ ದಳ
1983;ಎಸ್‌.ಎಸ್.ಕಾಂಬಳೆ;ಜೆ.ಎನ್‌.ಪಿ
1985;ಮಾರುತಿ ಗಂಗಪ್ಪ ಘೇವಾರಿ;ಜೆ.ಎನ್‌.ಪಿ
1989;ಎಸ್‌.ಬಿ.ಘಾಟಗೆ;ಕಾಂಗ್ರೆಸ್‌
1994;ಎಸ್‌.ಬಿ.ಘಾಟಗೆ;ಕಾಂಗ್ರೆಸ್‌

1999;ಎಸ್‌.ಬಿ.ಘಾಟಗೆ;ಕಾಂಗ್ರೆಸ್‌
2004;ಭೀಮಪ್ಪ ಸರಿಕರ;ಜೆಡಿಯು
2008;ದುರ್ಯೋಧನ ಐಹೊಳೆ;ಬಿಜೆಪಿ
2013;ದುರ್ಯೋಧನ ಐಹೊಳೆ;ಬಿಜೆಪಿ
2018;ದುರ್ಯೋಧನ ಐಹೊಳೆ;ಬಿಜೆಪಿ

***

2018ರ ಫಲಿತಾಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ
ದುರ್ಯೋಧನ ಐಹೊಳೆ;ಬಿಜೆಪಿ;67,502
ಪ್ರದೀಪಕುಮಾರ ಮಾಳಗೆ;ಕಾಂಗ್ರೆಸ್‌;50,954
ಮಹಾವೀರ ಮೋಹಿತೆ;ಪಕ್ಷೇತರ;24,627

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.