ADVERTISEMENT

ಚಿಕ್ಕೋಡಿ: ಮೊರಾರ್ಜಿ ವಸತಿ ಶಾಲೆಗೆ ಕೋಸಂಬೆ ಭೇಟಿ

ಅಸ್ವಸ್ಥರಾಗಿದ್ದ ವಿದ್ಯಾರ್ಥಿಗಳು: ಗುಣಮಟ್ಟದ ಆಹಾರ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:26 IST
Last Updated 8 ಡಿಸೆಂಬರ್ 2025, 2:26 IST
 ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಊಟ ಬಡಿಸಿದರು 
 ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಊಟ ಬಡಿಸಿದರು    

ಚಿಕ್ಕೋಡಿ: ತಾಲ್ಲೂಕಿನ ಹಿರೇಕೋಡಿ ಗ್ರಾಮದ ಹೊರವಲಯದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಶನಿವಾರ ಭೇಟಿ ನೀಡಿ, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೆ.11 ಹಾಗೂ ನ.2 ರಂದು ವಸತಿ ನಿಲಯದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಪ್ರಕರಣ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಶನಿವಾರ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ  ಪರಿಶೀಲಿಸಿದರು. ನಿತ್ಯವೂ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವಂತೆ ಅಡುಗೆ ಸಿಬ್ಬಂದಿ ಹಾಗೂ ವಸತಿ ನಿಲಯದ ಅಧಿಕಾರಿಗಳಿಗೆ ಸೂಚಿಸಿದರು.

ಬಾಲಕರ ವಸತಿ ನಿಲಯ ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ, ಸೀಲಿಂಗ್ ಫ್ಯಾನ್‌ಗಳನ್ನು ಬದಲಾಯಿಸಿ 3-4 ದಿನಗಳಲ್ಲಿ ಗೋಡೆಗೆ ಹಾಕುವ ಫ್ಯಾನ್‌ಗಳನ್ನು ಪ್ರತಿಯೊಂದು ಕೋಣೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು.

ADVERTISEMENT

ಮಕ್ಕಳು ಶಾಲೆಯ ತರಗತಿಗಳಿಗೆ ಹಾಜರಾಗುವ ಮೊದಲೇ ಎಲ್ಲಾ ಮಕ್ಕಳು ಬಿಸಿನೀರಿನ ಸ್ನಾನ ಮಾಡುವ ವ್ಯವಸ್ಥೆ ಶೀಘ್ರವೇ ಕೈಗೊಳ್ಳಬೇಕು ಎಂದರು.

ಅಧ್ಯಕ್ಷ ಶಶಿಧರ ಕೋಸಂಬೆ ಅವರು ಕೈಯಲ್ಲಿ ಸೌಟು ಹಿಡಿದು ವಸತಿ ನಿಲಯದ ಮಕ್ಕಳಿಗೆ ಊಟವನ್ನು ಬಡಿಸಿದರು. ಇವರೊಂದಿಗೆ ವಸತಿ ನಿಲಯದ ಪ್ರಾಚಾರ್ಯರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡಿದರು.

ನಂತರ  ವಸತಿ ನಿಲಯದ ಪ್ರಾಚಾರ್ಯ, ವಾರ್ಡನ್, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶಶಿಧರ ಕೋಸಂಬೆ ಸಭೆ ನಡೆಸಿದರು.

ವಸತಿ ನಿಲಯದಲ್ಲಿಯ ಕೊಳವೆಬಾವಿಯ ನೀರಿನ ಶುದ್ಧತೆಯ ಕುರಿತು ಭೂಗರ್ಭ ತಜ್ಞರು ಪರಿಶೀಲಿಸಿದ್ದು, ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಎಫ್.ಯು.ಪೂಜಾರಿ ತಿಳಿಸಿದರು.

ವಸತಿ ನಿಲಯದ ಆವರಣದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಬರೆಯಿಸುವುದು, ದೂರು ಪೆಟ್ಟಿಗೆ  ಅಳವಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಸತಿ ನಿಲಯದ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸೂಚಿಸಿದರು.

ಶಶಿಧರ ಅವರು ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.   

ಪ್ರಾಚಾರ್ಯೆ ಲತಾ ಬಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ, ಪಿಎಸ್‍ಐ ಬಸಗೌಡ ನೇರ್ಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಖಣದಾಳೆ, ಚಿಕ್ಕೋಡಿ ಸಿಡಿಪಿಒ ಸಂತೋಷ ಕಾಂಬಳೆ, ನಿಪ್ಪಾಣಿ ಸಿಡಿಪಿಒ ಸುಪ್ರಿಯಾ ಜಡಗೆ, ನಿಲಯ ಮೇಲ್ಚಿಚಾರಕ ಸಲೀಂಸಾಬ ತಹಶೀಲ್ದಾರ್ ಇತರರು  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.