ADVERTISEMENT

ನೌಕರಿ ಆಮಿಷ: ವಂಚಕರ ವಿರುದ್ಧ ಕ್ರಮ; ಬೆಳಗಾವಿ SP ಡಾ.ಭೀಮಾಶಂಕರ

16 ಮಂದಿಯಿಂದ ₹34 ಲಕ್ಷ ಪಡೆದ ಆರೋಪಿಗಳು, ಸಚಿವೆ, ರಾಜ್ಯಪಾಲರ ಸಹಿ ನಕಲು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:01 IST
Last Updated 13 ಆಗಸ್ಟ್ 2025, 2:01 IST
ಡಾ.ಭೀಮಾಶಂಕರ ಗುಳೇದ
ಡಾ.ಭೀಮಾಶಂಕರ ಗುಳೇದ   

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ಹಣ ವಂಚಿಸಿದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೂ ‍‍ಪತ್ರ ಬರೆದಿದ್ದರು. ನೊಂದಿತರು ದೂರು ದಾಖಲಿಸಲು ಮುಂದೆ ಬಾರದ ಕಾರಣ, ಎಫ್‌ಐಆರ್‌ ಮಾಡಲು ವಿಳಂಬವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

‘ಮುಖ್ಯ ಆರೋಪಿ ಮಂಜುನಾಥ ಮಲ್ಲಸರ್ಜ ಎಂಬಾತ 14 ಮಂದಿಯಿಂದ ₹30 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾನೆ. ರಾಜ್ಯಪಾಲರ ಸಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಸಹಿ ಹಾಗೂ ಅವರ ಆಪ್ತಸಹಾಯಕರ ಸಹಿಯನ್ನೂ ನಕಲು ಮಾಡಿದ್ದಾನೆ. ಸಚಿವರ ಲೆಟರ್‌ಹೆಡ್‌ಗಳನ್ನು ಬಳಸಿಕೊಂಡಿದ್ದು ಪತ್ತೆಯಾಗಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾವ್ಯಾ ಎಂಬ ಮಹಿಳೆ ಹಣ ಕೊಟ್ಟು ಮೋಸಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ದೂರು ನೀಡಲು ಮುಂದೆ ಬಂದಿಲ್ಲ. ರಾಜ್ಯಪಾಲರು ಹಾಗೂ ಸಚಿವರ ಸಹಿ ನಕಲು ಮಾಡಿದ ಕಾರಣ ನಾವು ಪ್ರಕರಣ ದಾಖಲಿಸಲೇಬೇಕಾಗಿದೆ. ಈ ಬಗ್ಗೆ ಕಾವ್ಯಾ ಅವರಿಗೆ ನೋಟಿಸ್‌ ಕೊಟ್ಟು, ಮನವರಿಕೆ ಮಾಡಿದರೂ ದೂರು ನೀಡಿಲ್ಲ. ನಾಲ್ಕು ತಿಂಗಳ ಬಳಿಕ ಇನ್ನೊಬ್ಬ ಮಹಿಳೆ ಲಿಖಿತ ದೂರು ನೀಡಿದ್ದರಿಂದ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಆತನನ್ನು ಬಂಧಿಸಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡದಿಂದ ಪೊಲೀಸರು ವಿಳಂಬ ಮಾಡಿಲ್ಲ’ ಎಂದರು.

ADVERTISEMENT

‘ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತಸಹಾಯಕ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ, ಇದು ಆರೋಪಿಗಳು ಹೇಳಿದ ಸುಳ್ಳು. ಸದ್ಯಕ್ಕೆ ಸೋಮನಗೌಡ ಭಾಗಿಯಾದ ಆಧಾರಗಳು ಇಲ್ಲ. ಇದೆಲ್ಲವನ್ನೂ ತನಿಖೆ ಮಾಡುವಂತೆ ಸ್ವತಃ ಸಚಿವರೇ ಸೂಚನೆ ನೀಡಿದ್ದಾರೆ’ ಎಂದು ಹೇಳಿದರು.

‘16 ಮಹಿಳೆಯರಿಗೆ ವಂಚನೆ’

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಸುವುದಾಗಿ ಮಂಜುನಾಥ ಮಲ್ಲಸರ್ಜ ಮತ್ತು ಸಂಗನಗೌಡ ಪಾಟೀಲ ಅವರು 16 ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಜಯಂತ ತಿಣೈಕರ್‌ ಆರೋಪಿಸಿದರು. ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಫೋನ್‌ಪೇ ಬ್ಯಾಂಕ್‌ ಖಾತೆ ಮೂಲಕವೂ ₹34 ಲಕ್ಷಕ್ಕಿಂತ ಹೆಚ್ಚಿನ ಪಡೆದು ವಂಚಿಸಿದ್ದಾರೆ. ಆದರೆ ರಾಜಕೀಯ ಒತ್ತಡದಿಂದಾಗಿ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ವಹಿಸುತ್ತಿಲ್ಲ. ಬದಲಿಗೆ ಅನ್ಯಾಯಕ್ಕೆ ಒಳಗಾದವರನ್ನು ಪದೇಪದೆ ಪೊಲೀಸ್‌ ಠಾಣೆಗೆ ಕರೆಯಿಸಿ ತೊಂದರೆ ಕೊಡುತ್ತಿದ್ದಾರೆ’ ಎಂದು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.