ADVERTISEMENT

ಮಗಳು ಒತ್ತಡದಲ್ಲಿದ್ದಾಳೆ, ಈಗ ಹೇಳಿಕೆ ಪಡೆಯಬೇಡಿ: ಯುವತಿಯ ತಂದೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 9:39 IST
Last Updated 29 ಮಾರ್ಚ್ 2021, 9:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ‘ನಮ್ಮ ಮಗಳನ್ನು ಒತ್ತಡದಿಂದ ಮುಕ್ತಿ ಮಾಡಿದ ಬಳಿಕ ಆಕೆಯಿಂದ ಹೇಳಿಕೆ ಪಡೆಯಬೇಕು’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿಯ ತಂದೆ ಆಗ್ರಹಿಸಿದರು.

ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಕೆ ಯಾವ ಸ್ಥಿತಿಯಲ್ಲಿದ್ದಾಳೆ ಎನ್ನುವುದು ಗೊತ್ತಿಲ್ಲ. ಆಕೆಯನ್ನು ನಾಲ್ಕೈದು ದಿನ ನಮ್ಮೊಂದಿಗೆ ಬಿಡಬೇಕು. ಈಗಿನ ಒತ್ತಡದ ಪರಿಸ್ಥಿತಿಯಲ್ಲಿ ಆಕೆಯಿಂದ ನೇರವಾಗಿ ಯಾವುದೇ ಹೇಳಿಕೆಯನ್ನೂ ನ್ಯಾಯಾಧೀಶರು ಪರಿಗಣಿಸಬಾರದು. ಆಕೆಗೆ ಸಮಯ ಕೊಡಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಹಿಂದೆ ಯಾರೂ ಇಲ್ಲ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಯಾರಿಂದಲೂ ಭಯವಿಲ್ಲ. ನಿವೃತ್ತ ಸೈನಿಕನಾದ ನಾನು ಆಕೆಗೆ ರಕ್ಷಣೆ ಒದಗಿಸಲು ಸಿದ್ಧವಿದ್ದೇನೆ. ಮುಖ್ಯಮಂತ್ರಿ, ನ್ಯಾಯಾಧೀಶರು ಹಾಗೂ ಗೃಹ ಸಚಿವರು ನಮ್ಮ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೋರಿದರು.

ADVERTISEMENT

‘ಅವರ ವಶದಲ್ಲಿ ನನ್ನ ಮಗಳಿದ್ದಾರೆ. ಸದನದಲ್ಲಿ ಏನಾಯ್ತು, ಹೊರಗಡೆ ಏನ್ ಮಾತಾಡುತ್ತಿದ್ದಾರೆ ಎನ್ನುವುದನ್ನು ನೋಡಿದ್ದೀರಿ. ಅದು ರಾಜಕೀಯವಲ್ಲವೇ? ಇದರಿಂದ ನಾವು ಮಾನಸಿಕವಾಗಿ ಬಹಳ ನೊಂದಿದ್ದೇವೆ. ಮಾನಸಿಕವಾಗಿ ಜರ್ಜರಿತವಾಗಿದ್ದೇವೆ ಮತ್ತು ಒತ್ತಡದಲ್ಲಿದ್ದೇವೆ. ಬಹಳ ನೊಂದಿದ್ದೇವೆ’ ಎಂದು ಕೇಳಿದರು.

‘ಎಸ್‌ಐಟಿ ಪೊಲೀಸರ ತನಿಖೆ ಮೇಲೆ ನಮಗೆ ನಂಬಿಕೆ ಇದೆ’ ಎಂದರು.

‘ಡಿಕೆಶಿ ವಿರುದ್ಧ ದೂರು ಕೊಡುವಿರಾ’ ಎಂಬ ಪ್ರಶ್ನೆಗೆ, ‘ನಮಗೆ ನಮ್ಮ ಮಗಳು ಮುಖ್ಯ. ಆಕೆ ನಮ್ಮಲ್ಲಿಗೆ ಬಂದ ಮೇಲೆ ಮುಂದೇನು ಮಾಡಬೇಕೆಂದು ನಮ್ಮ ವಕೀಲರನ್ನು ಕೇಳುತ್ತೇವೆ. ನಮ್ಮ ಬಳಿ ಒಟ್ಟು 11 ಸಾಕ್ಷಿಗಳಿವೆ. ಈಗಾಗಲೇ 2 ಆಡಿಯೊ ಬಿಡುಗಡೆ ಮಾಡಿದ್ದೇವೆ. ಇನ್ನೂ 9 ಇವೆ. ಮೊದಲು ಮಗಳನ್ನು ನಮ್ಮಲ್ಲಿಗೆ ಕಳುಹಿಸಿಕೊಡಬೇಕು’ ಎಂದು ಕೋರಿದರು.

‘ರಮೇಶ ಜಾರಕಿಹೊಳಿಯಿಂದ ಅನ್ಯಾಯವಾಗಿದೆ ಎಂದು ಮಗಳು ಹೇಳಿದರೆ ಏನು ಮಾಡುವಿರಿ’ ಎಂಬ ಪ್ರಶ್ನೆಗೆ, ‘ಕುಟುಂಬದವರೆಲ್ಲರೂ ಸೇರಿ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಮಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದಷ್ಟೆ ನಮಗೆ ಗೊತ್ತಿತ್ತು. ಅಲ್ಲಿನ ಸ್ನೇಹಿತರ ಬಗ್ಗೆ ಗೊತ್ತಿರಲಿಲ್ಲ’ ಎಂದು ಹೇಳಿದರು.

ಸಹೋದರ ಮಾತನಾಡಿ, ‘ಆಕೆಗೆ ಸ್ವಾತಂತ್ರ್ಯ ಕೊಡಬೇಕು. ಡಿ.ಕೆ. ಶಿವಕುಮಾರ್‌ ಬಳಿ ಹಣ ಪಡೆದು, ಕಳುಹಿಸಿದಲ್ಲಿ ಹೋಗಿ ಅವರು ಹೇಳಿದಂತೆಯೇ ಮಾಡುತ್ತಿದ್ದಾಳೆ. 25 ದಿನಗಳಿಂದ ನಮ್ಮಿಂದ ದೂರದಲ್ಲಿದ್ದಾಳೆ. ನ್ಯಾಯಾಧೀಶರು, ಅಕ್ಕನನ್ನು ನಾಲ್ಕು ದಿನ ನಮ್ಮೊಂದಿಗೆ ಬಿಡಬೇಕು. ಆಕೆಯನ್ನು ಮೊದಲು ಬಂಧ ಮುಕ್ತಗೊಳಿಸಬೇಕು. ಆಕೆಗೆ ಎಷ್ಟು ದಬ್ಬಾಳಿಕೆ ಮಾಡಿದ್ದಾರೋ, ಎಷ್ಟು ಚಿತ್ರ ಹಿಂಸೆ ಕೊಟ್ಟಿದ್ದಾರೋ ದೇವರೇ ಬಲ್ಲ. ನಮ್ಮೊಂದಿಗೆ ಕಳುಹಿಸುವುದು ಸಾಧ್ಯ ಆಗದಿದ್ದರೆ ನ್ಯಾಯಾಲಯದಲ್ಲೇ ನಾಲ್ಕೈದು ದಿನ ನೆಮ್ಮದಿಯಾಗಿ ಇರಿಸಿಕೊಳ್ಳಲಿ. ಆಪ್ತಸಮಾಲೋಚನೆ ನಡೆಸಿ ನಿರಾಳವಾದ ಬಳಿಕ ಹೇಳಿಕೆ ತೆಗೆದುಕೊಳ್ಳಲಿ’ ಎಂದು ಮನವಿ ಮಾಡಿದರು.

‘ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಪೊಲೀಸರು ಬಹಳ ಭದ್ರತೆ ಕೊಟ್ಟಿದ್ದಾರೆ. ನಾವು ಒತ್ತಾಯಪೂರ್ವಕವಾಗಿ ಯಾವುದೇ ಹೇಳಿಕೆ ಕೊಡುತ್ತಿಲ್ಲ’ ಎಂದರು.

‘ಮಾರ್ಚ್‌ 2ರಂದು ಆಕೆಯೊಂದಿಗೆ ಮಾತನಾಡಿದ್ದೆ. ಡಿ.ಕೆ. ಶಿವಕುಮಾರ್‌ ಹೇಳಿದಂತೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಳು. ಈಗ ಹೋಗಬೇಡ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು. ‘ದೂರು ಕೊಡುವುದಕ್ಕಿಂದ ನನಗೆ ಅಕ್ಕ ಬೇಕು’ ಎಂದು ತಿಳಿಸಿದರು.

ಮತ್ತೊಬ್ಬ ಸಹೋದರ, ‘ಈವರೆಗೆ ಬಂದಿರುವ ವಿಡಿಯೊ ಹಾಗೂ ಮುಂದೆ ಬರಲಿರುವ ವಿಡಿಯೊಗಳನ್ನು ಸಿ.ಡಿ. ಗ್ಯಾಂಗ್‌ನವರು ಹಾಗೂ ಡಿ.ಕೆ. ಶಿವಕುಮಾರ್‌ ಒತ್ತಾಯಪೂರ್ವಕವಾಗಿ ಮಾಡಿಸುತ್ತಿದ್ದಾರೆ. ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ದೂರಿದರು.

ತಾಯಿ ಮಾತನಾಡಿ, ‘ರಾಜಕೀಯದವರ ಜೊತೆ ಸೇರಬೇಡ ಎಂದು ಹೇಳಿದ್ದೆ. ಡಿ.ಕೆ. ಶಿವಕುಮಾರ್ ಸಂಬಂಧಿಕರು ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ ಎಂದು 4 ತಿಂಗಳ ಹಿಂದೆ ತಿಳಿಸಿದ್ದಳು. ಈಗಲೇ ₹ 40ಸಾವಿರ ಸಂಬಳ ತಗೊತಾ ಇದ್ದೀಯಾ. ಇದ್ಯಾಕೆ ಬೇಕು? ಮನೆಗೆ ಬಂದು ಬಿಡು. ಮದುವೆ ಮಾಡಿಕೊಡುತ್ತೇವೆ ಎಂದು ಹೇಳಿದ್ದೆ’ ಎಂದು ತಿಳಿಸಿದರು.

‘ಆ ಸಿಡಿಯಲ್ಲಿರುವ ನಾನಲ್ಲ ಎಂದು ಮಗಳು ಹೇಳಿದ್ದಳು. ಆಕೆಯಿಂದ ಮೊಬೈಲ್ ಫೋನ್‌ ಕಸಿದುಕೊಂಡಿದ್ದಾರೆ. ನನ್ನೊಂದಿಗೆ ಮಾತನಾಡಲು ಬಿಟ್ಟಿಲ್ಲ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.