ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಮಳೆ ಬಿಡುವು ನೀಡಿದ್ದರೂ ನದಿಗಳ ನೀರಿನ ಮಟ್ಟ ಏರುತ್ತಲೇ ಇದೆ. ರಾಮದುರ್ಗದಲ್ಲಿ ಮನೆ ಚಾವಣಿ ಕುಸಿದು, ವಾಮನರಾವ್ ಬಾಪೂ ಪವಾರ್ (75) ಎಂಬುವರು ಮೃತಪಟ್ಟಿದ್ದಾರೆ.
ಘಟಪ್ರಭಾ ನದಿಗೆ ಪ್ರವಾಹ ಬಂದಿದ್ದು ಗೋಕಾಕ ನಗರದ 200 ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೊಯ್ನಾ ಜಲಾಶಯ ಹಾಗೂ ರಾಜಾಪುರ ಬ್ಯಾರೇಜ್‌ನಿಂದ ನೀರು ಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಲ್ಲಿ 1.81 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಮಹಾರಾಷ್ಟ್ರದಿಂದ 1.40 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದು 2 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾದರೆ, ಪ್ರವಾಹ ಉಂಟಾಗಲಿದೆ.
ಗೋಕಾಕ, ರಾಯಬಾಗ, ಕಾಗವಾಡ, ಚಿಕ್ಕೋಡಿ, ಅಥಣಿ ಹಾಗೂ ಖಾನಾಪುರ ತಾಲ್ಲೂಕು ಸೇರಿ 38 ಸೇತುವೆಗಳು ಮುಳುಗಿವೆ. ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನವನ್ನು ಘಟಪ್ರಭಾ ನದಿ, ಹುಕ್ಕೇರಿ ತಾಲ್ಲೂಕಿನ ಕೊಟಬಾಗಿಯ ದುರ್ಗಾದೇವಿ ದೇವಸ್ಥಾನದ ಸುತ್ತ ಮಾರ್ಕಂಡೇಯ ನದಿ ನೀರು ಆವರಿಸಿದೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಹೊರಹರಿವು ಬುಧವಾರ 2.5 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದ್ದು, ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಸ್ಥರಿಗೆ ನೆರೆ ಆತಂಕ ಮೂಡಿದೆ. ಘಟಪ್ರಭಾ ನದಿಯಿಂದ ವ್ಯಾಪಕ ನೀರು ಆಲಮಟ್ಟಿ ಜಲಾಶಯದತ್ತ ಹರಿದು ಬರುತ್ತಿದ್ದು, ಬುಧವಾರ ಜಲಾಶಯದ ಒಳಹರಿವು 1,60,694 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ ಮುಂಭಾಗದ ಅರಳದಿನ್ನಿ, ಯಲಗೂರು, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮದ ಹಲವಾರು ಜಮೀನುಗಳ ಅಂಚಿಗೆ ನೀರು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಸುಪಾ ಜಲಾನಯನ ಪ್ರದೇಶದಲ್ಲಿ ಸತತ ಸುರಿಯುತ್ತಿರುವ ಮಳೆಗೆ ಸುಪಾ ಜಲಾಶಯಕ್ಕೆ ನೀರನ್ನು ಹರಿಸಲು ನಿರ್ಮಿಸಿರುವ ಅಪ್ಪರ ಕಾನೇರಿ ಜಲಾಶಯ ತುಂಬಿದೆ. ಕುಂಡಲ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬುಧವಾರ ಮುಳುಗಡೆಯಾಗಿದೆ.
ಸೇತುವೆ ಜೊತೆಗೆ ಅರ್ಧ ಕಿಲೋಮೀಟರ್‌ನಷ್ಟು ದೂರದ ರಸ್ತೆಯವರೆಗೆ ನೀರು ಆವರಿಸಿಕೊಂಡಿದೆ. ಕುಂಡಲ ಸೇರಿ ಕುರಾವಲಿ, ಕೆಲೋಲಿ, ಘಟ್ಟಾವ ಸೇರಿದಂತೆ ಹಲವು ಸಣ್ಣ ಪುಟ್ಟ ಹಳ್ಳಿಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.