ADVERTISEMENT

ಬೆಳಗಾವಿ | ಸಂಖ್ಯೆಯಲ್ಲಷ್ಟೇ ಮುಂದೆ; ಸೆಳೆತದಲ್ಲಿ ಹಿಂದೆ

2024–29ನೇ ಪ್ರವಾಸೋದ್ಯಮ ನೀತಿ ಅನುಷ್ಠಾನ, ಜಿಲ್ಲೆಯಲ್ಲಿ ಹೊಸದಾಗಿ ಮೂರು ತಾಣ ಸೇರ್ಪಡೆ

ಇಮಾಮ್‌ಹುಸೇನ್‌ ಗೂಡುನವರ
Published 27 ಸೆಪ್ಟೆಂಬರ್ 2025, 1:58 IST
Last Updated 27 ಸೆಪ್ಟೆಂಬರ್ 2025, 1:58 IST
ನಿರ್ವಹಣೆ ಕೊರತೆಯಿಂದ ಸವದತ್ತಿಯ ಕೋಟೆಯ ಅವಶೇಷ ಹಾಳಾಗುತ್ತಿರುವುದು ಪ್ರಜಾವಾಣಿ ಚಿತ್ರ: ಬಸವರಾಜ ಶಿರಸಂಗಿ
ನಿರ್ವಹಣೆ ಕೊರತೆಯಿಂದ ಸವದತ್ತಿಯ ಕೋಟೆಯ ಅವಶೇಷ ಹಾಳಾಗುತ್ತಿರುವುದು ಪ್ರಜಾವಾಣಿ ಚಿತ್ರ: ಬಸವರಾಜ ಶಿರಸಂಗಿ   

ಬೆಳಗಾವಿ: ರಾಜ್ಯದಲ್ಲಿ ಈ ವರ್ಷ ಕರ್ನಾಟಕ ಪ್ರವಾಸೋದ್ಯಮ ನೀತಿ 2024–29 ಅನುಷ್ಠಾನಗೊಂಡಿದ್ದು, ಜಿಲ್ಲೆಯ 101 ಸ್ಥಳಗಳನ್ನು ಪ್ರವಾಸಿ ತಾಣಗಳೆಂದು ಘೋಷಿಸಲಾಗಿದೆ. ಪ್ರವಾಸಿ ತಾಣಗಳ ಸಂಖ್ಯೆಯಲ್ಲಿ ಗಡಿಜಿಲ್ಲೆ ಮುಂದಿದ್ದರೂ, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

2024ರವರೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಗುರುತಿಸಿದ್ದ 98 ಪ್ರವಾಸಿ ತಾಣಗಳಿದ್ದವು. ಈ ಬಾರಿ ಬೈಲಹೊಂಗಲ ತಾಲ್ಲೂಕಿನ ವಕ್ಕುಂದದ ‘ತ್ರಿಕೂಟೇಶ್ವರ’ ಜೈನ ಬಸದಿ(ಕಲ್ಲಗುಡಿ), ರಾಯಬಾಗದ ರಾಜವಾಡೆ ಮತ್ತು ರಾಯಬಾಗ ತಾಲ್ಲೂಕಿನ ಕೋಳಿಗುಡ್ಡದ ಕಾಳಿಕಾ ಭುವನೇಶ್ವರ ದೇವಾಲಯ ಈ ಪಟ್ಟಿಗೆ ಸೇರ್ಪಡೆಯಾಗಿವೆ.

2023ರಲ್ಲಿ 98 ತಾಣಗಳಿಗೆ 3,50,37,186 ಪ್ರವಾಸಿಗರು ಭೇಟಿ ನೀಡಿದ್ದರು. 2024ರಲ್ಲಿ ಆ ಸಂಖ್ಯೆ 3,09,55,041ಕ್ಕೆ ಇಳಿಕೆಯಾಗಿದೆ.

ADVERTISEMENT

ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರು ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನ, ಜೋಗುಳಬಾವಿಯ ಸತ್ಯಮ್ಮನ ದೇವಸ್ಥಾನ, ರಾಯಬಾಗ ತಾಲ್ಲೂಕಿನ ಚಿಂಚಲಿಯ ಮಾಯಕ್ಕದೇವಿ ದೇವಸ್ಥಾನಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ.

ನಂತರದ ಸ್ಥಾನದಲ್ಲಿ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಚನ್ನಮ್ಮನ ಕಿತ್ತೂರು ಕೋಟೆ, ಖಾನಾಪುರ ತಾಲ್ಲೂಕಿನ ನಂದಗಡದ ರಾಯಣ್ಣನ ಸಮಾಧಿ, ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರುಮೃಗಾಲಯ, ಸವದತ್ತಿ ತಾಲ್ಲೂಕಿನ ಸೊಗಲ ಮತ್ತು ಖಾನಾಪುರದ ಜಲಪಾತಗಳಿವೆ. ಉಳಿದ ತಾಣಗಳು ಹೆಚ್ಚಿನ ಪ್ರವಾಸಿಗರನ್ನು ಸೆಳೆಯವಲ್ಲಿ ಸಫಲವಾಗಿಲ್ಲ.

ಪ್ರವಾಸಿ ಸರ್ಕಿಟ್‌ಗಳಿಗೆ ಯೋಜನೆ: ‘ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಧೂಪದಾಳ ಪಕ್ಷಿಧಾಮ, ಯೋಗಿಕೊಳ್ಳ, ಅರಭಾವಿಮಠ, ಹಿಡಕಲ್‌ ಜಲಾಶಯ ಒಳಗೊಂಡು ಒಂದು ಪ್ರವಾಸಿ ಸರ್ಕಿಟ್‌, ಕಾಕತಿ, ಕಿತ್ತೂರು, ಬೈಲಹೊಂಗಲ, ಸಂಗೊಳ್ಳಿ ಮತ್ತು ನಂದಗಡ ಒಳಗೊಂಡು ಇನ್ನೊಂದು ಸರ್ಕಿಟ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೊಗಲದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ₹1.75 ಕೋಟಿ ಬಿಡುಗಡೆಯಾಗಿದೆ. ಗೋಕಾಕ ಜಲಪಾತದಲ್ಲಿ ಕಾರ್‌ ಕೇಬಲ್‌ ಯೋಜನೆಗಾಗಿ ಈಚೆಗೆ ಡ್ರೋನ್‌ ಸಮೀಕ್ಷೆ ಮಾಡಲಾಗಿದೆ’  ಎಂದರು.

ಉಗರಗೋಳದಿಂದ ಯಲ್ಲಮ್ಮನಗುಡ್ಡಕ್ಕೆ ಸಾಗುವ ಮಾರ್ಗದ ರಸ್ತೆ ಹದಗೆಟ್ಟಿರುವುದು   ಪ್ರಜಾವಾಣಿ ಚಿತ್ರ

ಯಾರು ಏನಂತಾರೆ...?

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದೇವೆ. ಜಿಲ್ಲೆಯ ಎಲ್ಲ ತಾಣಗಳಿಗೂ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿಗರನ್ನು ಸೆಳೆಯಲಾಗುವುದು. ಸೌಮ್ಯಾ ಬಾಪಟ್‌ ಜಂಟಿನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಪಟ್ಟಿಯಲ್ಲಿ ಈ ವರ್ಷ ಕಲ್ಲಗುಡಿ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ಮಲಪ್ರಭಾ ನದಿಯಿಂದ ಸುತ್ತುವರಿದ ಕಲ್ಲಗುಡಿಗೆ ವಕ್ಕುಂದದ ದರ್ಗಾದಿಂದ ತೂಗುಸೇತುವೆ ನಿರ್ಮಿಸಿ ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕಿದೆ. ಸಿ.ಕೆ.ಮೆಕ್ಕೇದ ಸಾಮಾಜಿಕ ಹೋರಾಟಗಾರ ವಕ್ಕುಂದ ವಿವಿಧ ಚಲನಚಿತ್ರ ರಂಗ ಪ್ರಯೋಗಗಳಿಗೆ ಸಾಕ್ಷಿಯಾಗಿದ್ದ ಸವದತ್ತಿಯ ಐತಿಹಾಸಿಕ ಕೋಟೆ ನಿರ್ವಹಣೆ ಕೊರತೆಯಿಂದ ಇಂದು ಸೊರಗಿದೆ. ಒಂದೊಂದೇ ಪಳಿಯುಳಿಕೆ ಕಳಚಿ ಬೀಳುತ್ತಿವೆ. ನವಿಲುತೀರ್ಥ ಜಲಾಶಯದ ಉದ್ಯಾನಕ್ಕಿಂತ ಸುಂದರವಾಗಿದ್ದ ಕೋಟೆಯ ಉದ್ಯಾನ ಬಾಡಿದೆ. ಝಕೀರ್‌ ನದಾಫ್‌ ರಂಗಕರ್ಮಿ ಸವದತ್ತಿ

- ಪ್ರವಾಸಿಮಿತ್ರರು ಬೇಡಿಕೆಗೆ ತಕ್ಕಷ್ಟು ಇಲ್ಲ!

ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ಮಾಹಿತಿ ನೀಡಲು ಬೇಡಿಕೆಗೆ ತಕ್ಕಷ್ಟು ಪ್ರವಾಸಿ ಮಿತ್ರರು ಇಲ್ಲ. ಮುಖ್ಯರಸ್ತೆಯಿಂದ ಒಳಗಿರುವ ಹಲವು ತಾಣಗಳಿಗೆ ಹೋಗಲು ಬಸ್‌ ವ್ಯವಸ್ಥೆ ಇಲ್ಲ. ಲಕ್ಷಾಂತರ ಭಕ್ತರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಸ್ಥಿತಿಯಲ್ಲಿಲ್ಲ. ಉಗರಗೋಳದಿಂದ ಯಲ್ಲಮ್ಮನಗುಡ್ಡಕ್ಕೆ ಸಾಗುವ ಮಾರ್ಗದಲ್ಲಿ ಸಾಲು ಸಾಲಾಗಿ ಗುಂಡಿಗಳು ಬಿದ್ದಿದ್ದು ಅದರಲ್ಲೇ ಪ್ರಯಾಸಪಡುತ್ತ ಪ್ರವಾಸಿಗರು ಸಂಚರಿಸುತ್ತಿದ್ದಾರೆ. ವಿವಿಧ ಪ್ರವಾಸಿ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ವಸತಿಗೃಹ ಸಾರಿಗೆ ಮತ್ತಿತರ ಮೂಲಸೌಕರ್ಯ ಕೊರತೆ ಎದ್ದುಕಾಣುತ್ತಿದೆ. ಕೆಲವೆಡೆ ಹೋಟೆಲ್‌ಗಳು ಯಾತ್ರಿ ನಿವಾಸಗಳೂ ಇಲ್ಲದ ಸ್ಥಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.