ADVERTISEMENT

ಗೃಹ ಖಾತೆ ಸೇರಿ ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿರ್ವಹಿಸುವೆ: ಶಾಸಕ ಉಮೇಶ್ ಕತ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 14:02 IST
Last Updated 18 ಆಗಸ್ಟ್ 2019, 14:02 IST
   

ಬೆಳಗಾವಿ: ‘ನನಗೆ 3ನೇ ಬಾರಿಗೆ ಸಚಿವನಾಗುವ ಯೋಗ ಬಂದಿದೆ. ಯಾವುದೇ ಜವಾಬ್ದಾರಿ ಕೊಟ್ಟರೆ ನಿರ್ವಹಿಸುತ್ತೇನೆ’ ಎಂದು ಶಾಸಕ ಉಮೇಶ ಕತ್ತಿ ತಿಳಿಸಿದರು.

ಇಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗುತ್ತಿದ್ದೇನೆ. ಇಂಥದ್ದೇ ಸ್ಥಾನ ಬೇಕೆಂದು ಕೇಳುವುದಿಲ್ಲ. ಗೃಹ ಖಾತೆ ಸೇರಿ ಯಾವುದನ್ನೇ ಕೊಟ್ಟರೂ ಕೆಲಸ ಮಾಡುತ್ತೇನೆ. ಎರಡು ಬಾರಿ ಸಚಿವನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ’ ಎಂದು ಪ್ರತಿಕ್ರಿಯಿಸಿದರು.

‘ಬೆಳಗಾವಿ ದೊಡ್ಡ ಜಿಲ್ಲೆ. ಹೀಗಾಗಿ, ನಾಲ್ವರಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು. ಸದ್ಯ ಇಬ್ಬರಿಗೆ ಕೊಡುತ್ತಾರೆ ಎನ್ನುವ ಮಾಹಿತಿ ಇದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನವದೆಹಲಿಯಲ್ಲಿ ಪಕ್ಷದ ವರಿಷ್ಠರು ನಿರ್ಲಕ್ಷಿಸಿಲ್ಲ. ಅವರು ಹುಟ್ಟು ಹೋರಾಟಗಾರ. ಎಲ್ಲರೂ ಅವರನ್ನು ಗೌರವಿಸುತ್ತಾರೆ’ ಎಂದು ಹೇಳಿದರು.

‘ದೂರವಾಣಿ ಸಂಭಾಷಣೆ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬೇಕಿದ್ದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊಡಲಿ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಾಲೆಳೆದಿದ್ದಾರೆ ಎಂದು ಗೊತ್ತಾಯಿತು. ಅವಕಾಶವಿದ್ದರೆ ವಹಿಸಿ ಎಂದು ನಾನೂ ಮುಖ್ಯಮಂತ್ರಿಗೆ ಹೇಳುತ್ತೇನೆ. ಅಂತರರಾಷ್ಟ್ರೀಯ ಸಂಸ್ಥೆಗೆ ಬೇಕಿದ್ದರೂ ಕೊಡಲಿ’ ಎಂದರು.

‘ನನ್ನ ದೂರವಾಣಿ ಸಂಭಾಷಣೆ ಕದ್ದಾಲಿಸಲಿ, ಏನೂ ತೊಂದರೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.