ADVERTISEMENT

ಬಸವರಾಜ ಕಟ್ಟೀಮನಿ ಪ್ರಶಸ್ತಿ ವಿತರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 9:34 IST
Last Updated 3 ಅಕ್ಟೋಬರ್ 2019, 9:34 IST

ಬೆಳಗಾವಿ: ‘ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕಾದಂಬರಿ, ಕಥಾ ಸಾಹಿತ್ಯ ಪ್ರಶಸ್ತಿ ಹಾಗೂ ಯುವ ಸಾಹಿತ್ಯ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಇದೇ ತಿಂಗಳ 5ರಂದು ಸಂಜೆ 4.30ಕ್ಕೆ ಪ್ರತಿಷ್ಠಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರ ಕಾದಂಬರಿ ಪ್ರಶಸ್ತಿಗೆ ಡಾ.ಕೃಷ್ಣಮೂರ್ತಿ ಹನೂರು, 2019ರ ಕಥಾ ಸಾಹಿತ್ಯ ಪ್ರಶಸ್ತಿಗೆ ಡಾ.ಅಮರೇಶ ನುಗಡೋಣಿ ಹಾಗೂ ಯುವ ಸಾಹಿತ್ಯ ಪುರಸ್ಕಾರಕ್ಕೆ ಸ್ವಾಮಿ ಪೊನ್ನಾಚಿ (ಕಥಾ ಸಂಕಲನ– ಧೂಪದ ಮಕ್ಕಳು) ಭಾಜನರಾಗಿದ್ದಾರೆ. ವಿಮರ್ಶಕ ಪ್ರೊ.ಓ.ಎಲ್‌. ನಾಗಭೂಷಣಸ್ವಾಮಿ ಪ್ರಶಸ್ತಿ ವಿತರಿಸಲಿದ್ದಾರೆ. ಚಿಂತಕ ರಹಮತ್‌ ತರೀಕೆರೆ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ’ ಎಂದು ತಿಳಿಸಿದರು.

‘ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ ಅವರು ಪ್ರತಿಷ್ಠಾನದ ವೆಬ್‌ಸೈಟ್‌ www.kattimanitrust.com ಗೆ ಚಾಲನೆ ನೀಡಲಿದ್ದಾರೆ. ಚಂದ್ರಕಾಂತ ಕುಸನೂರ ಅವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಯ ಹಿಂದಿ ಅನುವಾದ ‘ಜ್ವಾಲಾಮುಖಿ ಪರ’ ಬಿಡುಗಡೆಯಾಗಲಿದೆ. ಪ್ರೊ. ಧರಣೇಂದ್ರ ಕುರಕುರಿ ಅನುವಾದ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಚಾರ ಸಂಕಿರಣ:ಅಂದು ಬೆಳಿಗ್ಗೆ 10ಕ್ಕೆ ‘ಕನ್ನಡದ ಸಣ್ಣಕಥೆಯ ಮಾದರಿಗಳು’ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಶಹಾಪುರದ ಸಿ.ಎಸ್‌. ಭೀಮರಾಯ ಅವರು ‘ಪ್ರಗತಿಶೀಲ ಮತ್ತು ನವ್ಯ ಮಾದರಿಯ ಕಥೆಗಳು’, ಬಾಗಲಕೋಟೆಯ ಸುಮಂಗಲಾ ಮೇಟಿ ಅವರು ‘ದಲಿತ ಬಂಡಾಯ ಮಾದರಿಯ ಕಥೆಗಳು’, ಕಲ್ಬುರ್ಗಿಯ ಜ್ಯೋತಿ ಕುಲಕರ್ಣಿ ಅವರು ‘ಮಹಿಳಾ ಅಸ್ಮಿತೆಯ ಕಥೆಗಳು’ ಕುರಿತು ಮಾತನಾಡಲಿದ್ದಾರೆ.

‘ಪ್ರತಿಷ್ಠಾನದ ಸದಸ್ಯ ಸಂಚಾಲಕ ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಾದಂಬರಿಕಾರ ಅಮರೇಶ ನುಗಡೋಣಿ ಕಾರ್ಯಕ್ರಮ ಉದ್ಘಾಟಿಸುವರು ಹಾಗೂ ‘ನವೋದಯ ಮಾದರಿಯ ಕಥೆಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ’ ಎಂದು ಹೇಳಿದರು.

ಪ್ರತಿಷ್ಠಾನದ ಸದಸ್ಯ ಸಂಚಾಲಕ ರಾಮಕೃಷ್ಣ ಮರಾಠೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.