ADVERTISEMENT

ಅನ್ಯ ಧರ್ಮೀಯ ಯುವಕ–ಯುವತಿ ನಡುವೆ ಪ್ರೀತಿ: ಯುವಕನ ಕೊಲೆ

ರೈಲ್ವೆ ಪೊಲೀಸರಿಂದ ಪ್ರಕರಣ ವರ್ಗಾವಣೆ: ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 10:34 IST
Last Updated 4 ಅಕ್ಟೋಬರ್ 2021, 10:34 IST
ಅರ್ಬಾಜ್ ಮುಲ್ಲಾ
ಅರ್ಬಾಜ್ ಮುಲ್ಲಾ   

ಬೆಳಗಾವಿ: ಅರ್ಬಾಜ್‌ ಮುಲ್ಲಾ (24) ಎನ್ನುವ ಮುಸ್ಲಿಂ ಯುವಕನ ಸಂಶಯಾಸ್ಪದ ಸಾವಿನ ಪ್ರಕರಣವನ್ನು ರೈಲ್ವೆ ಪೊಲೀಸರು ಜಿಲ್ಲಾ ಪೊಲೀಸರಿಗೆ ಭಾನುವಾರ ಹಸ್ತಾಂತರಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ‘ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆ ಯುವಕನನ್ನು ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆಯೊಂದಿಗೆ ಗುರುತಿಸಿಕೊಂಡವರು ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಲಾಗುತ್ತಿದೆ. ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ನೆಟ್ಟಿಗರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ; ಶೇರ್‌ ಮಾಡುತ್ತಿದ್ದಾರೆ.

ಖಾನಾಪುರ ಹೊರವಲಯದ ರೈಲು ಹಳಿಯ ಮೇಲೆ ಸೆ.28ರಂದು ಅರ್ಬಾಜ್‌ ಶವ ರುಂಡ–ಮುಂಡ ಬೇರೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರೀತಿ–ಪ್ರೇಮದ ಕಾರಣದಿಂದ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಮೂಲತಃ ಖಾನಾಪುರದ ಅರ್ಜಾಬ್‌, ಯುವತಿಯನ್ನು ಪ್ರೀತಿಸುತ್ತಿದ್ದ ವಿಷಯ ಆಕೆಯ ಕುಟುಂಬದವರಿಗೆ ಗೊತ್ತಾಗಿತ್ತು. ಕೆಲವು ಮುಖಂಡರು ಎರಡೂ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದರು. ಯುವಕನಿಗೆ ಬೆದರಿಕೆ ಹಾಕಿದ್ದರು. ಬಳಿಕ, ಯುವಕ ಹಾಗೂ ಆತನ ಪೋಷಕರು ಬೆಳಗಾವಿಗೆ ಸ್ಥಳಾಂತರಗೊಂಡಿದ್ದರು ಎನ್ನಲಾಗಿದೆ.

ADVERTISEMENT

ಸೆ.27ರಂದು ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ತಾಯಿಗೆ ಹೇಳಿ ಹೋಗಿದ್ದ ಅರ್ಬಾಜ್‌, ಮರುದಿನ ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಕೈಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಬೇರೆಡೆ ಕೊಂದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಹಳಿಯಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಐದು ದಿನಗಳ ನಂತರ ಪ್ರಕರಣವನ್ನು ಖಾನಾಪುರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

‘ರೈಲ್ವೆ ಪೊಲೀಸರಿಂದ ಖಾನಾಪುರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ. ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸೂಕ್ಷ್ಮ ಪ್ರಕರಣ ಇದಾಗಿರುವುದರಿಂದಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. 30ರಿಂದ 40 ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಯಾರನ್ನೂ ವಶಕ್ಕೆ ಪಡೆದಿಲ್ಲ ಅಥವಾ ಬಂಧಿಸಿಲ್ಲ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಯಿಯ ಆರೋಪವೇನು?

ಯುವಕನ ತಾಯಿ, ಇಲ್ಲಿನ ತೆಂಗಿನಗಲ್ಲಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಜಿಮಾ ಶೇಖ್‌ ಕೆಲವರ ಹೆಸರುಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.

‘ಮಗನೊಂದಿಗೆ ಖಾನಾಪುರದ ಮಾರುತಿನಗರದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಮಗ ಅಲ್ಲಿ ಹಿಂದೂ ಯುವತಿಯೊಂದಿಗೆ ವರ್ಷದಿಂದ ಪ್ರೇಮ ಸಂಬಂಧ ಹೊಂದಿದ್ದ. ಯುವತಿಯ ಮನೆಯಲ್ಲಿ ಗೊತ್ತಾಗಿದ್ದರಿಂದ, ಅವರು ಮಗನಿಗೆ ತೊಂದರೆ ಕೊಡುತ್ತಿದ್ದರು. ಆದ್ದರಿಂದ 2 ತಿಂಗಳ ಹಿಂದೆ ಬೆಳಗಾವಿಗೆ ಸ್ಥಳಾಂತರಗೊಂಡಿದ್ದೆವು’ ಎಂದು ತಿಳಿಸಿದ್ದಾರೆ.

‘ಇತ್ತೀಚೆಗೆ ನಮ್ಮನ್ನು ಕರೆಯಿಸಿಕೊಂಡಿದ್ದರು. ನಿಮ್ಮ ಮಗ ನಮ್ಮ ಮಗಳೊಂದಿಗೆ ಫೋನ್‌ನಲ್ಲಿ ಸಂಪರ್ಕ ಮುಂದುವರಿಸಿದ್ದಾನೆ ಎಂದು ದೂರಿದ್ದರು. ಅಲ್ಲಿ ಮಹಾರಾಜ, ಬಿರ್ಜೆ ಎನ್ನುವವರು ಹಾಗೂ ಯುವತಿಯ ತಂದೆ ಇದ್ದರು. ಅವರೆಲ್ಲರೂ ಅರ್ಬಾಜ್‌ಗೆ ಜೀವ ಬೆದರಿಕೆ ಹಾಕಿದ್ದರು. ಮೊಬೈಲ್‌ ಕಸಿದುಕೊಂಡು ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಸಿಮ್ ಕಾರ್ಡ್‌ ನಾಶಪಡಿಸಿದ್ದರು. ಇನ್ಮುಂದೆ ಕರೆ ಮಾಡದಂತೆ ಬೆದರಿಸಿದ್ದರು. ಅದಕ್ಕೆ ಒಪ್ಪಿಕೊಂಡು ನಾವು ವಾಪಸಾಗಿದ್ದೆವು’.

‘ಯುವತಿಯ ತಂದೆ, ಮಹಾರಾಜ, ಬಿರ್ಜೆ ಮತ್ತು ಕೆಲವರು ನನ್ನ ಮಗನನ್ನು ಕರೆಯಿಸಿಕೊಂಡು ಕೊಲೆ ಮಾಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರತಿಭಟನೆ: ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಖಾನಾಪುರದಲ್ಲಿ ಅಂಜುಮನ್ ಇಸ್ಲಾಂ ಸಮಿತಿಯವರು ಖಾನಾಪುರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಂದ್ ಮಾಡುವ ಎಚ್ಚರಿಕೆ

ಅರ್ಬಾಜ್ ಸಾವಿನ ಪ್ರಕರಣದ ಸತ್ಯಾಂಶವನ್ನು ಬುಧವಾರದ ಒಳಗೆ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಶುಕ್ರವಾರ (ಅ.8) ಬೆಳಗಾವಿ ಮತ್ತು ಖಾನಾಪುರ ಬಂದ್ ಮಾಡಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ. ಮುಖಂಡ ಅಸಾದುದ್ದೀನ್ ಒವೈಸಿ ಕೂಡ ಬರಲಿದ್ದಾರೆ.

–ಲತೀಫ್‌ಖಾನ್‌ ಪಠಾಣ, ಪ್ರಧಾನ ಕಾರ್ಯದರ್ಶಿ, ಎಐಎಂಐಎಂ ರಾಜ್ಯ ಘಟಕ

ಹಿಂದುತ್ವದ ಪರವಾಗಿ ಇರುವವರೆಲ್ಲರೂ ನಮ್ಮವರೆ. ಆದರೆ, ಮುಸ್ಲಿಂ ಯುವಕನ ಕೊಲೆ ‍ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಲಾಗುತ್ತಿದೆ. ನಮ್ಮವರನ್ನು ಸಿಲುಕಿಸಲಾಗುತ್ತಿದೆ.

–ರಮಾಕಾಂತ ಕೊಂಡುಸ್ಕರ, ಸಂಸ್ಥಾಪಕ, ಶ್ರೀರಾಮಸೇನಾ ಹಿಂದೂಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.