ADVERTISEMENT

ನರೇಂದ್ರ ಮೋದಿಗೆ ಜನರು ಪಾಠ ಕಲಿಸಬೇಕು: ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:12 IST
Last Updated 10 ಏಪ್ರಿಲ್ 2021, 13:12 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಳಗಾವಿ: ‘ದೇಶದಲ್ಲಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಮಾಡುತ್ತಿರುವುದು ಸರಿಯಲ್ಲ. ಅವರ ಆಡಳಿತದಿಂದ ತೊಂದರೆಯಾಗಿದೆ ಎನ್ನುವ ಸಂದೇಶವನ್ನು ಜನರು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಫಲಿತಾಂಶದ ಮೂಲಕ ರವಾನಿಸಬೇಕು. ಅವರಿಗೆ ಪಾಠ ಕಲಿಸಬೇಕು’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೋರಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಏನೇ ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿ ಮೋದಿ ಇದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ’ ಎಂದರು.

‘ಮೋದಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕಪ್ಪು ಹಣ ತರಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸಲಿಲ್ಲ. ಆದರೂ ಜನರು ಮೋದಿ ಮೋದಿ ಎಂದು ಚಪ್ಪಾಳೆ ತಟ್ಟುತ್ತಿರುವುದು ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ತೈಲ, ರಸಗೊಬ್ಬರ, ಅಗತ್ಯ ವಸ್ತುಗಳು ಹೀಗೆ... ಎಲ್ಲದರ ಬೆಲೆಯೂ ಗಗನಕ್ಕೇರಿದೆ. ರೈತ ವಿರೋಧಿ ಕಾನೂನುಗಳನ್ನು ತರಲಾಗಿದೆ. ಈ ಬಗ್ಗೆ ಹೋರಾಡುವವರು ಸಂಸತ್ತಿನಲ್ಲಿ ಬೇಕು. ಹೀಗಾಗಿಯೇ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ. ದೇಶದ ಎಲ್ಲ ವರ್ಗದವರನ್ನೂ ರಕ್ಷಿಸುವುದಕ್ಕಾಗಿ ಜನರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಅಗತ್ಯವಿದೆ’ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ, ಆರ್.ವಿ. ದೇಶಪಾಂಡೆ, ಡಾ.ಅಂಜಲಿ ನಿಂಬಾಳ್ಕರ್, ಗಣೇಶ ಹುಕ್ಕೇರಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಮುಖಂಡರಾದ ಕೆ.ಎಚ್. ಮುನಿಯಪ್ಪ, ಎಚ್.ಎಂ. ರೇವಣ್ಣ, ಫಿರೋಜ್ ಸೇಠ್, ಪ್ರಕಾಶ ಹುಕ್ಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.