ADVERTISEMENT

ಮಟ್ಕಾ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ, ಕಿಂಗ್‌ಪಿನ್ ಸೇರಿ 23 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 12:38 IST
Last Updated 23 ಸೆಪ್ಟೆಂಬರ್ 2020, 12:38 IST
ಬೆಳಗಾವಿಯಲ್ಲಿ ಮಟ್ಕಾ ಜೂಜಾಟದ ಕಿಂಗ್‌ಪಿನ್‌ ಅನ್ನು ಪೊಲೀಸರು ಬಂಧಿಸಿದ್ದಾರೆ
ಬೆಳಗಾವಿಯಲ್ಲಿ ಮಟ್ಕಾ ಜೂಜಾಟದ ಕಿಂಗ್‌ಪಿನ್‌ ಅನ್ನು ಪೊಲೀಸರು ಬಂಧಿಸಿದ್ದಾರೆ   

ಬೆಳಗಾವಿ: ಇಲ್ಲಿನ ಖಂಜರ್‌ ಗಲ್ಲಿಯಲ್ಲಿ ಮಂಗಳವಾರ ತಡರಾತ್ರಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, ಕಿಂಗ್‌ಪಿನ್‌ ಮತ್ತು ಬುಕ್ಕಿ ಸೇರಿದಂತೆ 23 ಮಂದಿಯನ್ನು ಬಂಧಿಸಿದ್ದಾರೆ.

ಹಲವು ವರ್ಷಗಳಿಂದ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಮಹಮ್ಮದ್ ಶಫಿ ತಹಶೀಲ್ದಾರ್‌ ಪ್ರಮುಖ ಆರೋಪಿ. ಅವರೊಂದಿಗೆ 22 ಮಂದಿಯನ್ನು ಬಂಧಿಸಲಾಗಿದ್ದು, ಅವರ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ಆರೋಪಿಗಳಿಂದ ₹2.11 ಲಕ್ಷ, 15 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ‘ಅವರು ‘ಕಲ್ಯಾಣ’ ಮಟ್ಕಾ ಎನ್ನುವ ಜೂಜಾಟದಲ್ಲಿ ತೊಡಗಿದ್ದರೆಂಬ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.

ಡಿಸಿಪಿ ಡಾ.ವಿಕ್ರಮ್ ಅಮಟೆ ನೇತೃತ್ವದಲ್ಲಿ ಮಾರ್ಕೆಟ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡವನ್ನು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್‌ ಪ್ರಶಂಸಿಸಿದ್ದಾರೆ.

ADVERTISEMENT

‘ನಗರದಲ್ಲಿ ಇಂತಹ ಮಟ್ಕಾ ಅಥವಾ ಇಸ್ಪೀಟ್ ಜೂಜಾಟ, ಮಾದಕ ವಸ್ತುಗಳ ಮಾರಾಟ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಕೋರಿದ್ದಾರೆ.

ಆರೋಪಿ ಬಂಧನ:ಮನೆಯೊಂದರಲ್ಲಿ ಕಳವು ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಗೇದಾಳದ ಯಲ್ಲಪ್ಪ ನಾಯಿಕ ಬಂಧಿತ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ದೂರುದಾರ ಯಲ್ಲಪ್ಪ ಗೌಡನ್ನವರ ಅವರ ಮನೆಯಲ್ಲಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಕಳವು ಮಾಡಿ ಬಚ್ಚಿಟ್ಟಿದ್ದ 14.560 ಗ್ರಾಂ.ತೂಕದ ಬಂಗಾರದ ಸರ, 17.500 ಗ್ರಾಂ. ತೂಕದ ನೆಕ್ಲೇಸ್ ಹಾಗೂ ನಗದು ₹ 1.35 ಲಕ್ಷ ಸೇರಿ ₹ 2.71 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಪಣಗುತ್ತಿಯ ಯಲ್ಲಪ್ಪ ಗೌಡನ್ನವರ ಮನೆಯಲ್ಲಿ ಕಳವಾಗಿದ್ದ ಬಗ್ಗೆ ದೂರು ನೀಡಿದ್ದರು. ಇದನ್ನು ಆಧರಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಕತಿ ಠಾಣೆ ಇನ್‌ಸ್ಪೆಕ್ಟರ್‌ ರಾಘವೇಂದ್ರ ಹಳ್ಳೂರ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

ಮಾರುವವರ ಮೇಲೆ ಕ್ರಮ:ನಗರದಲ್ಲಿ ಈಚೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಮಾಂಜಾ ದಾರ ಕೊಯ್ದು ಗಾಯವಾದ ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು, ನಿಷೇಧಿತ ಮಾಂಜಾ ದಾರ ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ದಾರವನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ‘ಪರಿಶೀಲನಾ ದಾಳಿ ನಡೆಯಲಿದೆ’ ಎಂದು ತಿಳಿಸಿದ್ದಾರೆ.

‘ಸಾರ್ವಜನಿಕರು, ಅಕ್ರಮವಾಗಿ ಮಾರುವವರ ಬಗ್ಗೆ ಮಾಹಿತಿ ಇದ್ದಲ್ಲಿ ನೀಡಬೇಕು’ ಎಂದು ಪೊಲೀಸರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.