ADVERTISEMENT

ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗದ ಅನುದಾನ: ಮಾ. 18ರಂದು ಕಿತ್ತೂರು ಬಂದ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 15:33 IST
Last Updated 11 ಮಾರ್ಚ್ 2025, 15:33 IST
<div class="paragraphs"><p>ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು.</p></div>

ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು.

   

ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೆಲವು ಪ್ರಾಧಿಕಾರಗಳಿಗೆ ಅನುದಾನ ನೀಡಿದ ಸರ್ಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನೇ ಕಡೆಗಣಿಸಿದೆ. ಈ ತಾರತಮ್ಯ ಖಂಡಿಸಿ ಮಾರ್ಚ್‌ 18ರಂದು ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲು, ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಂಗಳವಾರ ನಡೆದ ಸಭೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡಿತು.

‘ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚನ್ನಮ್ಮನ ವರ್ತುಲದಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಲಾಗುವುದು. ಅನುದಾನ ಹಂಚಿಕೆಯಲ್ಲಿ ಕಿತ್ತೂರಿಗೆ ಆದ ಅನ್ಯಾಯ ಖಂಡಿಸಲಾಗುವುದು’ ಎಂದು ನೇತೃತ್ವ ವಹಿಸಿದ್ದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಘೋಷಿಸಿದರು.

ADVERTISEMENT

‘ಕೆಲವು ಪ್ರಾಧಿಕಾರಿಗಳಿಗೆ ಹತ್ತಾರು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹೀಗಿರುವಾಗ, ಕಿತ್ತೂರು ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ₹10 ಕೋಟಿಯೂ ಬೇಡವೇ’ ಎಂದು ಪ್ರಶ್ನಿಸಿದರು.

‘ಈ ಸಲದ ಬಜೆಟ್‌ನಿಂದ ಕಿತ್ತೂರಿನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇಲ್ಲಿಯೂ ಪ್ರವಾಸೋದ್ಯಮ ಬೆಳೆಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಿತ್ತೂರಿಗೆ ಒಳ್ಳೆಯ ಕಾಲ ಬರುವುದಿಲ್ಲ. ಜಯದ ಛಲದೊಂದಿಗೆ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನದ್ದು ತಾಯಿ ಮತ್ತು ಮಗನ ಸಂಬಂಧ. ಸಂಗೊಳ್ಳಿಯ ವೈಭವ ನೋಡಿ, ‘ತಾಯಿ ನಿನಗೆ ಏನೂ ಮಾಡುತ್ತಿಲ್ಲ’ ಎಂದು ರಾಯಣ್ಣನ ಅಂತರಾತ್ಮ ದುಃಖಿಸುತ್ತಿರಬೇಕು
ಹನುಮಂತ ಲಂಗೋಟಿ, ಮಾಜಿ ಅಧ್ಯಕ್ಷ, ಪಟ್ಟಣ ಪಂಚಾಯಿತಿ

ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಣಿಕೊಪ್ಪ, ‘ಕಿತ್ತೂರಿಗೆ, ರಾಣಿ ಚನ್ನಮ್ಮನಿಗೆ ಮೊದಲಿನಿಂದಲೂ ಅನ್ಯಾಯ ಆಗುತ್ತಲೇ ಬಂದಿದೆ. ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಆಗಿದ್ದರೂ, ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಅವರನ್ನು ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಲಾಗಿದೆ. ಪ್ರಾಧಿಕಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಾಗಿ ಪಕ್ಷಾತೀತವಾಗಿ ನಾಡಿನ ಜನರು ಹೋರಾಟ ಮಾಡಿ, ಹಕ್ಕೊತ್ತಾಯ ಮಂಡಿಸಬೇಕು’ ಎಂದರು.

ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ದೇಗುಲಹಳ್ಳಿ, ಅಂಬಡಗಟ್ಟಿಯ ಮಠದ ವೀರೇಶ್ವರ ಸ್ವಾಮೀಜಿ, ಕಾದರವಳ್ಳಿಯ ಮೌಲನಾ ಹಜರತ್ ತನ್ವೀರಸಾಬ್ ಮುಜಾವರ್ ಅವರು, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನಿರ್ಧಾರ ಬೆಂಬಲಿಸಿ ಮಾತನಾಡಿದರು.

ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ದಳವಾಯಿ, ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತ ಲಂಗೋಟಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಚಂದ್ರಗೌಡ ಪಾಟೀಲ, ಲಿಂಗಾಯತ ಪಂಚಮಸಾಲಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಆರ್.ಪಾಟೀಲ ಮತ್ತಿತರರು ಉಪಸ್ಥಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.