
ಬೈಲಹೊಂಗಲ: ‘ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೊತ್ಸವ ಸಮಿತಿ ವತಿಯಿಂದ ಫೆ.2ರಂದು ವೀರರಾಣಿ ಕಿತ್ತೂರು ಚನ್ನಮ್ಮನ ಐದನೇ ವರ್ಷದ ಲಿಂಗೈಕ್ಯ ಜ್ಯೋತಿ ಯಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು. ಸಮಾಜದ ಎಲ್ಲ ಬಾಂಧವರು ಸೇರಿಕೊಂಡು ಯಶಸ್ವಿಗೊಳಿಸಬೇಕು’ ಎಂದು ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ತಾಲ್ಲೂಕು ಘಟಕ, ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ವತಿಯಿಂದ ಫೆ.2ರಂದು ನಡೆಯಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಜ್ಯೋತಿ ಯಾತ್ರೆ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಭಾರತ ಮಾತೆಯ ಸಾಕಾರ ಮೂರ್ತಿಯೇ ವೀರರಾಣಿ ಕಿತ್ತೂರು ಚನ್ನಮ್ಮ. ಆ ಮಹಾತಾಯಿ ಪುಣ್ಯಸ್ಮರಣೆಯನ್ನು ಎಲ್ಲರೂ ಅರ್ಥಪೂರ್ಣವಾಗಿ ಆಚರಿಸಬೇಕು. ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳ ಕಾಕತಿಯಿಂದ ಜ್ಯೋತಿಯಾತ್ರೆ ನಡೆಸಬೇಕೆಂದು ಚನ್ನಮ್ಮನ ಅಭಿಮಾನಿಗಳ ಒತ್ತಾಸೆ ಆಗಿತ್ತು. ಈ ಜ್ಯೋತಿ ಯಾತ್ರೆಯನ್ನು ಕಳೆದ ನಾಲ್ಕು ವರ್ಷಗಳಿಂದ ನೆರವೇರಿಸಿಕೊಂಡು ಬರಲಾಗಿದೆ. ಐದನೇ ವರ್ಷದ ಜ್ಯೋತಿ ಯಾತ್ರೆಗೆ ವಿಶೇಷ ಮೆರಗು ತರುವ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗೂಡಿ ಕೆಲಸ ಮಾಡಬೇಕು. ಪ್ರತಿ ತಾಲ್ಲೂಕಿನ ಜನರು ಯಾತ್ರೆಯಲ್ಲಿ ಭಾಗವಹಿಸಬೇಕು. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸಹಕಾರ ನೀಡಬೇಕು’ ಎಂದರು.
ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ ಅದ್ಯಕ್ಷತೆ ವಹಿಸಿ ಮಾತನಾಡಿ, ‘ಚನ್ನಮ್ಮನ ಜ್ಯೋತಿ ಯಾತ್ರೆ ಯಾವುದೇ ಪಕ್ಷ, ಸಮಾಜ, ಜಾತಿಗೆ ಸಿಮಿತವಾದ ಜ್ಯೋತಿ ಯಾತ್ರೆ ಅಲ್ಲ. ಸಮಾಜದ ಎಲ್ಲ ಜನರು ಸೇರಿಕೊಂಡು ಚನ್ನಮ್ಮನ ಜ್ಯೋತಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕು’ ಎಂದರು.
ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ಕಾರ್ಯದರ್ಶಿ ಮಹೇಶ ಹರಕುಣಿ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ವಕೀಲ ಎಫ್.ಎಸ್.ಸಿದ್ದನಗೌಡರ ವೇದಿಕೆಯಲ್ಲಿ ಇದ್ದರು.
ಸಮಾಜ ಮುಖಂಡರಾದ ಎಂ.ವೈ.ಸೋಮಣ್ಣವರ, ಬಿ.ಬಿ.ಗಣಾಚಾರಿ, ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ಮುರುಗಯ್ಯ ಮಠದ, ಸೋಮಯ್ಯ ಕೊಪ್ಪದ, ಉಳವಪ್ಪ ದೇಗಾಂವಿ, ಬಸವರಾಜ ನಾಗನೂರ, ಸಂಗಯ್ಯ ವಸ್ತ್ರದ, ಮಲ್ಲಿಕಾರ್ಜುನ ಉಪ್ಪಿನ, ಮಹೇಶ ಕೋಟಗಿ, ಬಿ.ಬಿ.ಸಂಗನಗೌಡರ, ಮುತ್ತುರಾಜ ಮತ್ತಿಕೊಪ್ಪ ಸಿದ್ದಾರೂಢ ಹೊಂಡಪನವರ, ಕುಮಾರ ದಳವಾಯಿ, ಪ್ರಭಾಕರ ಭಜಂತ್ರಿ, ಶಿವಾನಂದ ಬೆಳಗಾವಿ, ರತ್ನಾ ಗೋಧಿ, ನಾಗಪ್ಪ ಗುಂಡ್ಲೂರ, ಸಂತೋಷ ಹುಣಶೀಕಟ್ಟಿ, ಅನೇಕರು ಇದ್ದರು. ಇದೇ ವೇಳೆ ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ಸಂಚಾಲಕರನ್ನಾಗಿ ಪತ್ರಕರ್ತ ರವಿಕುಮಾರ ಹುಲಕುಂದ ಅವರನ್ನು ಪೂಜ್ಯರು ನೇಮಕ ಮಾಡಿ ಘೋಷಣೆ ಮಾಡಿದರು. ವಿಶ್ವಗುರು ಬಸವೇಶ್ವರ, ಚನ್ನಮ್ಮನ ಭಾವಚಿತ್ರ ವಿರುವ ಫಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.