ಬೈಲಹೊಂಗಲ: ‘ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ದೇಶಪ್ರೇಮವನ್ನು ನಾಡಿನ ಜನತೆಗೆ ಪರಿಚಯಿಸುವುದಕ್ಕಾಗಿ ಪ್ರತಿ ವರ್ಷ ಅ.23, 24, 25ರಂದು ಆಚರಿಸುವ ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಪ್ರತೀಕವಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ವೀರರಾಣಿ ಕಿತ್ತೂರು ಚನ್ನಮ್ಮನ ವೀರಜ್ಯೋತಿ ಯಾತ್ರೆಯನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿ ಚನ್ನಮ್ಮನ ಕಿತ್ತೂರಿಗೆ ಬೀಳ್ಕೋಟ್ಟು ಅವರು ಮಾತನಾಡಿದರು.
‘ಸರ್ಕಾರ ಈ ಭಾಗದಲ್ಲಿ ಕಿತ್ತೂರು, ಬೆಳವಡಿ, ಸಂಗೊಳ್ಳಿ ಉತ್ಸವವನ್ನು ಆಚರಿಸಿಕೊಂಡು ಬಂದಿದೆ. ಈ ಉತ್ಸವವಗಳು ಜನೋತ್ಸವಾಗಬೇಕು. ಉತ್ಸವವಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕು. ಅಧಿಕಾರಿಗಳು, ಸಿಬ್ಬಂದಿಗೆ ಮಾತ್ರ ಉತ್ಸವಗಳು ಎಂಬಂತಾಗಿದೆ. ಜನರು ಆಸಕ್ತಿ ವಹಿಸಿ ಉತ್ಸವಗಳಲ್ಲಿ ಸೇರಬೇಕು. ಸರ್ಕಾರದ ಧೇಯೋದ್ದೇಶ ಸಫಲವಾಗಬೇಕು’ ಎಂದರು.
‘ನವೀಕೃತಗೊಂಡ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ, ರೂಪಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಎಂದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ ಬಾರಿ ಕಿತ್ತೂರು ಉತ್ಸವ ದ್ವಿಶತಮಾನೋತ್ಸವದ ಸವಿ ನೆನಪಿಗಾಗಿ ಬೈಲಹೊಂಗಲ ಉತ್ಸವವನ್ನೂ ಆಚರಿಸಲಾಗಿತ್ತು. ಆದರೆ ಈ ಬಾರಿ ಬೈಲಹೊಂಗಲದಲ್ಲಿ ಕಾರ್ಯಕ್ರಮ ನಡೆಸಲು ಅನುದಾನದ ಕೊರತೆ ಇದೆ. ಆದಷ್ಟು ಬೇಗ ಮುಖ್ಯಮಂತ್ರಿಗಳು, ಸಚಿವರನ್ನು ಆಹ್ವಾನಿಸಿ ನವೀಕೃತಗೊಂಡ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಉದ್ಘಾಟಿಸಲಾಗುವುದು. ರೂಪಕಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಮೂರು ಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ತಹಶೀಲ್ದಾರ ಎಚ್.ಎನ್.ಶಿರಹಟ್ಟಿ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಉಪಾಧ್ಯಕ್ಷ ಬುಡ್ಡೆಸಾಬ ಶಿರಸಂಗಿ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಕನ್ನಡಪರ ಹೋರಾಟಗಾರ ಮಹಾಂತೇಶ ತುರಮರಿ, ಕಿತ್ತೂರು ಕರ್ನಾಟನ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ಎಫ್.ಎಸ್.ಸಿದ್ದನಗೌಡ, ಮುರುಗೇಶ ಗುಂಡ್ಲೂರ, ಶಿರಸ್ತೆದಾರ ಜಿತೇಂದ್ರ ನಿಡೋಣಿ, ಕಂದಾಯ ನಿರೀಕ್ಷಕ ಬಿ.ಬಿ.ಬೋರಗಲ್ಲ, ಗ್ರಾಮಲೆಕ್ಕಾಧಿಕಾರಿ ಪರಮಾನಂದ ಕಮ್ಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.