ADVERTISEMENT

ಅ.23, 24ರಂದು ಕಿತ್ತೂರು ಉತ್ಸವ

ಪೂರ್ವಭಾವಿ ಸಭೆ: ಸಚಿವ ಗೋವಿಂದ ಕಾರಜೋಳ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:23 IST
Last Updated 6 ಅಕ್ಟೋಬರ್ 2021, 12:23 IST
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು   

ಚನ್ನಮ್ಮನ ಕಿತ್ತೂರು: ‘ರಾಣಿ ಚನ್ನಮ್ಮನ ತ್ಯಾಗ ಮತ್ತು ಬಲಿದಾನ ಸ್ಮರಣೆಯ ಐತಿಹಾಸಿಕ ಕಿತ್ತೂರು ಉತ್ಸವವನ್ನು ಅ. 23 ಹಾಗೂ 24ರಂದು ಸರಳ ಮತ್ತು ಸುಂದರ ರೀತಿಯಲ್ಲಿ ಆಚರಿಸಲಾಗುವುದು’ ಎಂದು ಬೃಹತ್ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ‘ಉತ್ಸವಕ್ಕೆ ಸರ್ಕಾರ ₹75 ಲಕ್ಷ ಅನುದಾನ ನೀಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಉದ್ಘಾಟನೆಗೆ ಆಮಂತ್ರಿಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಇದನ್ನು ಅವರ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕಿತ್ತೂರು ಉತ್ಸವ ನಮ್ಮ ಮನೆಯ ಹಬ್ಬದಂತೆ ಆಚರಿಸಬೇಕು. ಮನೆಗೊಬ್ಬರು ಕೋಟೆ ಆವರಣ ಸ್ವಚ್ಛಗೊಳಿಸಬೇಕು. ಈ ಕಾರ್ಯದಲ್ಲಿ ಅಗತ್ಯವಿದ್ದರೆ ನಾನೂ ಭಾಗಿಯಾಗುತ್ತೇನೆ. ಇದಕ್ಕಾಗಿ ಸರ್ಕಾರದ ಕಡೆಗೆ ನೋಡುವುದು, ಟೆಂಡರ್ ಕರೆಯುವುದು, ಮೇಲೊಬ್ಬನನ್ನು ಉಸ್ತುವಾರಿಗೆ ನೇಮಿಸುವುದು ಬೇಡ’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

‘ಉತ್ತರ ಕರ್ನಾಟಕದಲ್ಲಿ ಜನಪದ ಕಲಾವಿದರು ಹೆಚ್ಚಾಗಿದ್ದಾರೆ. ಈ ಭಾಗದ ಕಲಾವಿದರಿಗೆ ಹೆಚ್ಚು ಅವಕಾಶ ನೀಡಬೇಕು. ಎಲ್ಲರನ್ನೊಳಗೊಂಡು ಉತ್ಸವ ಆಚರಿಸಬೇಕು. ಇದರ ಯಶಸ್ಸಿಗೆ ಉಪಸಮಿತಿಗಳ ಜವಾಬ್ದಾರಿಯೂ ಹೆಚ್ಚಾಗಿದೆ’ ಎಂದು ವಿವರಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಒಂದೆಡೆ ಕೋವಿಡ್ ಭಯವಿದ್ದರೆ ಮತ್ತೊಂದೆಡೆ ಉತ್ಸವ 25 ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಇಲ್ಲಿಯ ಜನರ ಭಾವನೆಗಳಿಗೆ ಸ್ಪಂದಿಸಿ ಉತ್ಸವ ಆಚರಣೆ ಮಾಡಬೇಕು‘ ಎಂದರು.

‘ಮೊದಲು ಉತ್ಸವಕ್ಕೆ ₹30 ಲಕ್ಷ ಅನುದಾನ ನೀಡಲಾಗುತ್ತಿತ್ತು. ಅ ನಂತರ ₹70 ಲಕ್ಷಕ್ಕೆ ಏರಿಕೆಯಾಯಿತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ₹1 ಕೋಟಿ ಅನುದಾನ ದೊರೆಯಿತು’ ಎಂದರು.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. 13ಕ್ಕೂ ಹೆಚ್ಚು ಜನರು ಸಭೆಯಲ್ಲಿ ಮಾತನಾಡಿ ಹಲವು ಸಲಹೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪವಿಭಾಗಾಧಿಕಾರಿ ಶಶಿಧರ ಬಗಲಿ ಸ್ವಾಗತಿಸಿದರು. ಎಸ್. ಎಸ್. ಹಾದಿಮನಿ ನಿರೂಪಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಓ ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೆಳಗಾವಿ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ, ಡಿಎಚ್ಒ ಡಾ. ಎಸ್. ವಿ. ಮುನ್ಯಾಳ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಮಹೇಶ ಪತ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಧಿಕಾರಿಗಳು, ಸುತ್ತಲಿನ ಹಳ್ಳಿಗಳ ನಾಗರಿಕರು, ಯುವ ಸಂಘಟನೆ ಕಾರ್ಯಕರ್ತರು, ಕಿತ್ತೂರು ವಂಶಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.