ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ತಿಗಡೊಳ್ಳಿಯ ಪ್ರಗತಿಪರ ರೈತ ಮಹಾಂತೇಶ ರವೀಂದ್ರ ತಿಗಡಿ ಅವರು ತೋಟಗಾರಿಕೆ ಬೆಳೆಯಲ್ಲಿ ಹೊಸಹಾದಿ ತುಳಿದಿದ್ದಾರೆ. ಗುಲಾಬಿ ಹೂವು ಕೃಷಿಯಲ್ಲಿ ಒಲವು ತಳೆದಿರುವ ಅವರು, ಬೊಗಸೆ ತುಂಬ ಆದಾಯ ಪಡೆಯುತ್ತಿದ್ದಾರೆ.
ಊರ ವ್ಯಾಪ್ತಿಯಲ್ಲಿರುವ ಸ್ವಂತ ಜಮೀನಿನಲ್ಲಿ ಪುಷ್ಪ ಕೃಷಿ ಸಾಹಸ ಅವರಿಗೆ ಹೆಚ್ಚು ಖುಷಿ ಕೊಟ್ಟಿದೆ. ಹಾಗಾಗಿ ಹೆಚ್ಚು ಪ್ರದೇಶದಲ್ಲಿ ಗುಲಾಬಿ ತರುವು ನಾಟಿ ಮಾಡುವ ಉತ್ಸಾಹ ಅವರದ್ದು.
‘ಬಟನ್ ರೋಸ್ ಅಥವಾ ಮರೂನ್ ರೋಸ್ ತಳಿಯ ಹೂವುಗಳನ್ನು ಅಲಂಕಾರಕ್ಕೆ ಹೆಚ್ಚು ಬಳಸುತ್ತಾರೆ. ಹಬ್ಬ, ಮದುವೆ ಸಮಾರಂಭಗಳು ಬಂದರೆ, ಈ ಗುಲಾಬಿ ಹೂವಿಗೆ ಬೇಡಿಕೆ ಇರುತ್ತದೆ. ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚುತ್ತ ಹೋಗುತ್ತದೆ. ಬೇರೆ ತೋಟಗಾರಿಕೆ ಬೆಳೆಗಳಿಗಿಂತ ಲಕ್ಷ, ಲಕ್ಷ ಆದಾಯವನ್ನು ಈ ಬೆಳೆ ತರುತ್ತಿದೆ. ಮಾಸಿಕವಾಗಿ ಆದಾಯ ಬರುವುದರಿಂದ ಮನೆ ಮತ್ತು ಹೊಲದ ಖರ್ಚಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಒಂದೂವರೆ ಎಕರೆ ಪ್ರದೇಶ: ‘ಒಂದೂವರೆ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯ ಮಧ್ಯೆ ಕೆಂಗುಲಾಬಿ ಬೆಳೆ ಪ್ರಯೋಗ ಮಾಡಲಾಗಿದೆ. ಹತ್ತು ಅಡಿ ಅಂತರದಲ್ಲಿ ದಾಳಿಂಬೆ ಗಿಡ ನೆಡಲಾಗಿದೆ. ಇದರ ಮಧ್ಯೆ ಗುಲಾಬಿಯ 1300 ತರುವು ನಾಟಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಮುಂಡಗೋಡ ಬಳಿಯ ನರ್ಸರಿಯೊಂದರಲ್ಲಿ ಈ ಗುಲಾಬಿ ಹೂವಿನ ಸಸಿ ಸಿಗುತ್ತವೆ. ₹15 ನೀಡಿದರೆ ಮನೆಯವರೆಗೆ ತಂದು ಕೊಡುತ್ತಾರೆ. ಈಗ ₹20ರಿಂದ ₹25ರ ವರೆಗೆ ದರ ಹೆಚ್ಚಿಸಲಾಗಿದೆ’ ಎನ್ನುತ್ತಾರೆ ಅವರು.
‘ನೇರವಾಗಿ ಗುಲಾಬಿ ಹೂವು ಕೃಷಿ ಮಾಡುವುದಿದ್ದರೆ, ಸಾಲಿನಿಂದ ಸಾಲಿಗೆ ಐದು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಮೂರು ಅಡಿಗೆ ನಾಟಿ ಮಾಡಿದರೆ ಸಾಕಾಗುತ್ತದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಅದರ ಮೂಲಕವೇ ರಸಗೊಬ್ಬರ ಹಾಗೂ ಪ್ರೋಟಿನ್‌ಯುಕ್ತ ಗೊಬ್ಬರ ನೀಡಲಾಗುತ್ತದೆ. ಹೆಚ್ಚು ಹೂವು ಬಿಡಬೇಕೆಂದರೆ ಕೆಲವು ಪೋಷಕಾಂಶಗಳನ್ನು ಗಿಡಗಳಿಗೆ ಸಿಂಪಡಿಸಬೇಕು. ಇದಕ್ಕೂ ಕೀಟಬಾಧೆಯಿದೆ. ಕ್ರಿಮಿನಾಶಕ ಸಿಂಪಡಿಸಿದರೆ ಹತೋಟಿಗೆ ಬರುತ್ತದೆ’ ಎಂದು ತಿಳಿಸಿದರು.
‘ಮೂರು ತಿಂಗಳಾದ ನಂತರ ಹೂವುಗಳನ್ನು ಕೊಯ್ಲು ಮಾಡಬಹುದು. ಆರಂಭದ ಬೀಡು ಕಡಿಮೆ ಇಳುವರಿ ನೀಡುತ್ತದೆ. ಅನಂತರ ಹೆಚ್ಚು ಹೂವುಗಳು ಅರಳುತ್ತವೆ. ವಾರದಲ್ಲಿ ಎರಡರಿಂದ ಮೂರು ಸಲ ಕೊಯ್ಲು ಮಾಡಬಹುದು’ ಎಂದರು.
‘ಅತಿ ಕಡಿಮೆ ಧಾರಣಿ ಎಂದರೂ, ಪ್ರತಿ ಕೆ.ಜಿಗೆ ₹100ರಿಂದ ₹120 ದರ ಸಿಗುತ್ತದೆ. ತಿಂಗಳಿಗೆ ಸರಾಸರಿ ₹30 ಸಾವಿರದಿಂದ ₹35 ಸಾವಿರ ಆದಾಯ ಬರುತ್ತದೆ’ ಎಂದು ಹೇಳಿದರು.
ಸಂಪರ್ಕಕ್ಕೆ ಮೊ.7353278175
ಸಸಿ ನಾಟಿ ಮಾಡಿದ 3 ತಿಂಗಳಿಗೆ ಹೂವು ಅರಳಲು ಆರಂಭಿಸುತ್ತದೆ. ಆದರೆ ಅವುಗಳನ್ನು ಚಿವುಟಬೇಕು. 4 ತಿಂಗಳಿನಿಂದ ಕೊಯ್ಲು ಆರಂಭಿಸಬೇಕು. ನಿಗದಿತ ಸಮಯಕ್ಕೆ ರಸಗೊಬ್ಬರ ಮೈಕ್ರೊ ನ್ಯೂಟ್ರಿನ್ಸ್ ನೀಡಿದರೆ ಇಳುವರಿ ಹೆಚ್ಚುತ್ತದೆಮಹಾಂತೇಶ ತಿಗಡಿ, ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.