ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಸಂಸ್ಥಾನ, ರಾಣಿ ಚನ್ನಮ್ಮನ ಶೌರ್ಯ, ಸಾಹಸ, ಜೀವನ ಶೈಲಿ, ರಾಣಿ ಮತ್ತು ಸೇನಾನಿಗಳ ಹೋರಾಟದ ಕಥನವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಿತ್ತರಿಸುವ ‘ಥೀಮ್ ಪಾರ್ಕ್’ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಆಡಳಿತಾತ್ಮಕವಾಗಿ ಮಂಜೂರಾತಿ ದೊರೆತಿದ್ದು, ಈ ಭಾಗದ ಜನರ ಹರ್ಷವನ್ನು ಇಮ್ಮಡಿಗೊಳಿಸಿದೆ.
ಈಗಿನ ಯುವ ಪೀಳಿಗೆ ಅರಿಯುವ ಹಾಗೆ ಆಧುನಿಕ ತಂತ್ರಜ್ಞಾನದ ಈ ‘ಥೀಮ್ ಪಾರ್ಕ್’ ಯೋಜನೆ ಜಾರಿ ದೇಶದಲ್ಲಿಯೇ ಪ್ರಥಮ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸುತ್ತವೆ. ಯೋಜನೆ ಶೀಘ್ರ ಅನುಷ್ಠಾನಗೊಂಡು ಹೆಚ್ಚಿನ ಪ್ರವಾಸಿಗರನ್ನು ಕಿತ್ತೂರು ಕಡೆಗೆ ಸೆಳೆಯಲಿದೆ’ ಎಂಬ ನಿರೀಕ್ಷೆ ಇದೆ.
₹30 ಕೋಟಿ ಅನುದಾನ: ‘ಥೀಮ್ ಪಾರ್ಕ್ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹30 ಕೋಟಿ ಬಿಡುಗಡೆ ಮಾಡಿದೆ. ಆಡಳಿತಾತ್ಮಕ ಮಂಜೂರಾತಿಯೂ ಸಿಕ್ಕಿದ್ದು, ನೀಲನಕ್ಷೆ ಪ್ರಕಾರ ಯೋಜನೆ ಅನುಷ್ಠಾನಗೊಳ್ಳಲಿದೆ.
ಅಂಡರಾಯ್ಡ್ ಮೊಬೈಲ್ ಸಾಧನ ಮೂಲಕ ಕೋಡ್ ಸ್ಕ್ಯಾನ್ ಮಾಡಿದರೆ ಪರದೆ ಮೇಲೆ ಇತಿಹಾಸ ಅರಿಯುವ ಸಾಹಿತ್ಯವು ತಂತ್ರಜ್ಞಾನದಲ್ಲಿ ಪ್ರದರ್ಶನವಾಗಲಿದೆ. ಇದು ದೇಶದಲ್ಲಿಯೇ ವಿಶೇಷ ಪ್ರಯತ್ನ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಬಣ್ಣಿಸಿದರು.
‘ಕಲಾ ಗ್ಯಾಲರಿ, ಬರ್ಮೆಡ್ ಗ್ರೀನ್, ಹೂವಿನ ಹಾಸು, ಎತ್ತರಕ್ಕೆ ಚಿಮ್ಮುವ ಬಣ್ಣಗಳ ಕಾರಂಜಿ, ಗ್ಯಾಲರಿ, ಪ್ರತಿಮೆ, ತಿನಿಸುಕಟ್ಟೆ, ಮೂಲ ಸೌಲಭ್ಯ ಸೇರಿ ಅನೇಕ ವ್ಯವಸ್ಥೆಗಳನ್ನು ಥೀಮ್ ಪಾರ್ಕ್ ಒಳಗೊಂಡಿದೆ’ ಎಂದು ನೀಲನಕ್ಷೆಯ ವಿವರ ನೀಡಿದರು.
‘ಇಲ್ಲಿನ ಕೋಟೆ ಅವಶೇಷ, ವಸ್ತುಸಂಗ್ರಹಾಲಯ ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಾರೆ. ರಾಣಿ ಚನ್ನಮ್ಮನ ಹೋರಾಟ, ಹಿಂದಿನ ಕಾಲದ ಪೋಷಾಕು, ಖಡ್ಗ, ಡಾಲು, ಅಲ್ಲಿರುವ ಶಿಲ್ಪಗಳು, ಕಲಾ ಗ್ಯಾಲರಿ ವೀಕ್ಷಕರಲ್ಲಿ ಸ್ಪೂರ್ತಿ ತುಂಬುತ್ತವೆ. ಥೀಮ್ ಪಾರ್ಕ್ ಶೀಘ್ರ ನಿರ್ಮಾಣಗೊಂಡು ಪ್ರವಾಸಿಗರಿಗೆ ಮತ್ತು ವೀಕ್ಷಕರಿಗೆ ಮಾಹಿತಿ ಜತೆಗೆ ಹೊಸ ಅನುಭವವನ್ನು ತಂದುಕೊಡಲಿದೆ’ ಎನ್ನುತ್ತಾರೆ ಅವರು.
ತಂತ್ರಜ್ಞಾನದ ಮೂಲಕವೇ ಇಂದಿನ ಯುವಕರಿಗೆ ಕಿತ್ತೂರು ಇತಿಹಾಸ ತಿಳಿಸುವ ಕಾರ್ಯಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು ಸಂತಸ ತಂದಿದೆಬಾಬಾಸಾಹೇಬ ಪಾಟೀಲ ಶಾಸಕ
ಸಿದ್ದರಾಮಯ್ಯ ಸರ್ಕಾರವು ಥೀಮ್ ಪಾರ್ಕ್ ಯೋಜನೆ ಅನುಷ್ಠಾನಕ್ಕಾಗಿ ಆಡಳಿತಾತ್ಮಕವಾಗಿ ಮಂಜೂರಾತಿ ನೀಡಿದೆ. ದೇಶದಲ್ಲಿಯೇ ಅತ್ಯಾಧುನಿಕವಾಗಿ ನಿರ್ಮಾಣವಾಗಲಿದೆಆಶ್ಫಾಕ್ ಹವಾಲ್ದಾರ್ ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.