ADVERTISEMENT

ಅನುದಾನ ಕೊರತೆ: ಕುಸ್ತಿ ಇಲ್ಲ, ಕಿತ್ತೂರು ಉತ್ಸವದ ಜಟ್ಟಿಪ್ರೇಮಿಗಳಿಗೆ ನಿರಾಸೆ

ಇಮಾಮ್‌ಹುಸೇನ್‌ ಗೂಡುನವರ
Published 22 ಅಕ್ಟೋಬರ್ 2025, 5:47 IST
Last Updated 22 ಅಕ್ಟೋಬರ್ 2025, 5:47 IST
ಕಳೆದ ವರ್ಷ ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ (ಸಂಗ್ರಹ ಚಿತ್ರ)
ಕಳೆದ ವರ್ಷ ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ (ಸಂಗ್ರಹ ಚಿತ್ರ)   

ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಇಲ್ಲಿ ನಡೆಯುವ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿಯೂ ಒಂದು. ಮೂರು ದಿನಗಳ ಉತ್ಸವದ ಕೊನೇ ದಿನ (ಅಕ್ಟೋಬರ್ 25) ನಡೆಯುವ ಜಟ್ಟಿಗಳ ಕಾಳಗ ವೀಕ್ಷಣೆಗೆ ಸಾವಿರಾರು ಜನ ಸೇರುತ್ತಾರೆ. ಆದರೆ,  ಈ ಬಾರಿ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸದಿರುವುದು ಜಟ್ಟಿಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

2023ರಲ್ಲಿ ಉತ್ಸವದ ಪ್ರಯುಕ್ತ ನಡೆದ ಅಂತರರಾಷ್ಟ್ರೀಯ ಕುಸ್ತಿ
ಪಂದ್ಯಾವಳಿಯಲ್ಲಿ ಇರಾನ್‌ ದೇಶದ ರಿಜಾ, ಅಹಮದ್ ಮಿರ್ಜಾ  ಪಾಲ್ಗೊಂಡಿದ್ದರು. 2024ರ ಟೂರ್ನಿಯಲ್ಲಿ ಇರಾನ್‌ ದೇಶದ ಇರ್ಫಾನ್ ಹುಸೇನ್‌ಜಾದ್ ಶಾ ಅಲಿ ಭಾಗವಹಿಸಿದ್ದರು. ತಮ್ಮೂರಿನಲ್ಲೇ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಗಳನ್ನು ನೋಡಿ, ಗ್ರಾಮಸ್ಥರು ಸಂಭ್ರಮಿಸಿದ್ದರು.

ಆದರೆ, ಈ ಬಾರಿ ಅನುದಾನ ಕೊರತೆ ಕಾರಣಕ್ಕೆ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿ ಆಯೋಜನೆಗೆ ಹಿನ್ನಡೆ ಉಂಟಾಗಿದೆ. ಲಭ್ಯವಿರುವ ಅನುದಾನದಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾದ ಕಾರಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು, ‘ಅಂತರರಾಷ್ಟ್ರೀಯ ಕುಸ್ತಿಪಟುಗಳನ್ನು ಪಂದ್ಯಕ್ಕೆ ಆಹ್ವಾನಿಸಲಾಗದು’ ಎಂದಿದ್ದಾರೆ.

ADVERTISEMENT

ಈ ಬಾರಿಯ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ‍ಪುರುಷರ ವಿಭಾಗದಲ್ಲಿ 50 ಮತ್ತು ಮಹಿಳೆಯರ ವಿಭಾಗದಲ್ಲಿ ಏಳು ಜೋಡಿ ಸೆಣಸಲಿವೆ. ಕರ್ನಾಟಕದ ಜೊತೆಗೆ, ಪಂಜಾಬ್‌, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪೈಲ್ವಾನರು ಭಾಗವಹಿಸುವರು.

₹15 ಲಕ್ಷ ಅನುದಾನ: ಕಳೆದ ಬಾರಿಯ ಉತ್ಸವದಲ್ಲಿ ವಾಲಿಬಾಲ್‌, ಕಬಡ್ಡಿ, ಕುಸ್ತಿ ಮತ್ತಿತರ ಕ್ರೀಡೆಗಳ ಆಯೋಜನೆಗೆ ರಾಜ್ಯ ಸರ್ಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ₹22 ಲಕ್ಷ ಅನುದಾನ ಕೊಟ್ಟಿತ್ತು. ಈ ಬಾರಿ ₹15 ಲಕ್ಷ ಮಾತ್ರ ನೀಡಿದೆ.

‘ವಿದೇಶದ ಒಂದು ಜೋಡಿ ಪೈಲ್ವಾನರನ್ನು ಆಹ್ವಾನಿಸಲು ₹3 ಲಕ್ಷ ಖರ್ಚಾಗುತ್ತದೆ. ಆದರೆ, ಈಗ ಲಭಿಸಿದ ಅನುದಾನದಲ್ಲಿ ಕುಸ್ತಿ, ವಾಲಿಬಾಲ್‌, ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ, ಜಲಸಾಹಸ ಕ್ರೀಡೆಗಳ ಆಯೋಜನೆ ಜತೆಗೆ, ವಿದೇಶದ ಪೈಲ್ವಾನರನ್ನು ಕರೆಯಿಸಲಾಗದು’ ಎಂದು ಅಧಿಕಾರಿಗಳು ತಿಳಿಸಿದರು. 

ಸರ್ಕಾರ ನೀಡಿದ ಅನುದಾನದಲ್ಲೇ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ
ಬಿ.ಶ್ರೀನಿವಾಸ ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.