ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನದ ಅಳಿದುಳಿದ ಸ್ಮಾರಕಗಳ ಸಂರಕ್ಷಣೆ, ರಾಣಿ ಚನ್ನಮ್ಮ ಆಳಿದ ಪಟ್ಟಣ ಅಭಿವೃದ್ಧಿ ಹಾಗೂ ಕಿತ್ತೂರನ್ನು ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶ ಇಟ್ಟುಕೊಂಡು ರಚಿಸಿದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಿಸಬೇಕೆಂಬ ಈ ನಾಡಿನ ಜನರ ದಶಕದ ಬೇಡಿಕೆಗೆ ಸರ್ಕಾರ ಇನ್ನೂ ಸ್ಪಂದಿಸುತ್ತಿಲ್ಲ.
'ಬೈಲಹೊಂಗಲದ ಉಪ ವಿಭಾಗಾಧಿಕಾರಿ ಅವರೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಕಾರ್ಯಭಾರ ಹೆಚ್ಚಿದ್ದರಿಂದ ಪ್ರಾಧಿಕಾರಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ’ ಎಂಬ ಅಳಲು ಇಲ್ಲಿನ ನಾಗರಿಕರದ್ದು.
‘ಕಿತ್ತೂರು ನಾಡಿನ ಜನರ ಒತ್ತಾಸೆ ಮೇರೆಗೆ ರಚಿಸಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 2010-11ರಲ್ಲಿದ್ದ ಬಿಜೆಪಿ ಸರ್ಕಾರ, ವಿಧೇಯಕದ ಸ್ವರೂಪ ನೀಡಿದೆ. ವಾರ್ಷಿಕ ಅನುದಾನ ನಿಗದಿ ಮಾಡಿದ್ದರೂ, ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕಂತುಗಳಲ್ಲಿ ನಿಗದಿ ಮಾಡಿರುವ ಅನುದಾನವನ್ನು ಪ್ರಾಧಿಕಾರ ಒಮ್ಮೊಮ್ಮೆ ಖರ್ಚು ಕೂಡ ಮಾಡಿರುವುದಿಲ್ಲ. ಮಾಡಿದ್ದರೂ ಉಪ ವಿಭಾಗಾಧಿಕಾರಿ ಕಚೇರಿ ದುರಸ್ತಿಗಾಗಿ ಬಳಕೆ ಮಾಡಲಾಗಿದೆ’ ಎಂಬ ಆರೋಪ ಕೇಳಿಬರುತ್ತಿದೆ.
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಪ್ರಾಧಿಕಾರ ಸೇರಿ ಸರ್ಕಾರ ರಚಿಸಿದ ಕೆಲವು ಪ್ರಾಧಿಕಾರ ಹಾಗೂ ಮಂಡಳಿಗಳಿಗೆ ಮುಖ್ಯಮಂತ್ರಿ ಅವರೇ ಅಧ್ಯಕ್ಷರಾಗಿದ್ದಾರೆ. ಆದರೆ, 2023ರ ವಿಧಾನಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಈ ಜವಾಬ್ದಾರಿಯನ್ನು ಕಂದಾಯ ಸಚಿವರ ಹೆಗಲಿಗೆ ಸಾಗಿಸಿದ್ದಾರೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ನೊಗವನ್ನು ಈಗ ಎಳೆಯುತ್ತಿದ್ದಾರೆ.
‘ಈ ಪ್ರಾಧಿಕಾರಕ್ಕೆ ಸರ್ಕಾರೇತರ ಸದಸ್ಯರನ್ನು ಸರ್ಕಾರ ನೇಮಿಸಬೇಕು ಎಂಬ ನಿಯಮವಿದೆ. ಆ ಪ್ರಕ್ರಿಯೆಯೂ ಇನ್ನೂ ನಡೆದಂತೆ ಕಾಣುತ್ತಿಲ್ಲ. ಇಲ್ಲಿಯ ಕೋಟೆ ಆವರಣದಲ್ಲಿ ಕೆಲವು ಕಾಮಗಾರಿಗಳು ಪ್ರಾಧಿಕಾರದ ವತಿಯಿಂದ ಸಾಗಿವೆ. ಮಹತ್ವಾಕಾಂಕ್ಷಿಯ ಥೀಮ್ ಪಾರ್ಕ್ ಯೋಜನೆ ರೂಪುಗೊಂಡಿದೆ. ಅನುದಾನ ಬಿಡುಗಡೆಯೂ ಆಗಿದೆ. ಆದರೆ, ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿಲ್ಲ’ ಎಂಬುದು ಇಲ್ಲಿನವರ ದೂರು.
‘ಈಗಾಗಲೇ ರೂಪಿಸಲಾಗಿರುವ ಯೋಜನೆಗಳು ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳಬೇಕು. ಈ ಹಿಂದೆ ಗುರುತಿಸಲಾಗಿರುವ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ 30 ತಾಣಗಳ ಅಭಿವೃದ್ಧಿ ಯೋಜನೆ ನೀಲನಕ್ಷೆಯಲ್ಲಿರುವ ಕಾರ್ಯಗಳು ವೇಗ ಪಡೆದುಕೊಳ್ಳಬೇಕು. ಕಿತ್ತೂರಿಗೇ ಹೆಚ್ಚು ಆದ್ಯತೆ ನೀಡಿ ಪ್ರವಾಸಿತಾಣವಾಗಿ ರೂಪಿಸುವಲ್ಲಿ ಸರ್ಕಾರ ಗಮನ ಹರಿಸಬೇಕು. ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ₹500 ಕೋಟಿ ವೆಚ್ಚದ ಯೋಜನೆ ರೂಪುಗೊಳ್ಳಬೇಕು. ಪ್ರಾಧಿಕಾರಕ್ಕೆ ಪ್ರತ್ಯೇಕ ಅಧಿಕಾರಿ ನೇಮಿಸಬೇಕು’ ಎಂಬುದು ರಾಣಿ ಚನ್ನಮ್ಮ ನವಭಾರತ ಸೇನೆ ಮುಖಂಡರಾದ ಬಸವರಾಜ ಭೀಮರಾಣಿ, ಜಗದೀಶ ಕಡೋಲಿ ಅವರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.