ಪ್ರಭಾಕರ ಕೋರೆ
ಬೆಳಗಾವಿ: ‘ಯರಗಟ್ಟಿ ತಾಲ್ಲೂಕಿನ ತೆನಿಕೊಳ್ಳದಲ್ಲಿ 60 ಎಕರೆ ಪ್ರದೇಶದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಸ್ಥಾಪಿಸಿದ್ದೇವೆ. ಉತ್ತರ ಕರ್ನಾಟಕದ ಮೊದಲ ಖಾಸಗಿ ಕೃಷಿ ಕಾಲೇಜು ಇದಾಗಿದ್ದು, 2025-26ನೇ ಸಾಲಿನಿಂದಲೇ ಕಾರ್ಯಾರಂಭ ಮಾಡಲಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇದರಲ್ಲಿ 72 ವಿದ್ಯಾರ್ಥಿಗಳಿಗೆ(ಶೇ 60) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮತ್ತು 48 ವಿದ್ಯಾರ್ಥಿಗಳಿಗೆ(ಶೇ 40) ಕೆಎಲ್‌ಇ ಸಂಸ್ಥೆ ಮೂಲಕ ನಾಲ್ಕು ವರ್ಷಗಳ ಅವಧಿಯ ಬಿ.ಎಸ್ಸಿ(ಕೃಷಿ) ಕೋರ್ಸ್‌ಗೆ ಪ್ರವೇಶ ನೀಡಲಾಗುವುದು’ ಎಂದರು.
‘ಪ್ರವೇಶಾತಿಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ರೈತರ ಮಕ್ಕಳೇ ಆಗಿರುತ್ತಾರೆ. ಅದರಲ್ಲೂ, ಕೃಷಿಭೂಮಿ ಹೊಂದಿದ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆಯಿಂದ ಸೀಟು ನೀಡಲು ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.
‘ಕೃಷಿ ಕಾಲೇಜು ಸ್ಥಾಪನೆಗೆ 12 ವರ್ಷಗಳಿಂದ ಮಾಡಿದ ಪ್ರಯತ್ನ ಫಲ ನೀಡಿವೆ. ಕರ್ನಾಟಕ ಹೊರತುಪಡಿಸಿ, ಬೇರೆ ರಾಜ್ಯಗಳಲ್ಲಿ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಲಾಗಿತ್ತು. ಕೃಷಿಯಲ್ಲಿ ಆಸಕ್ತಿ ಹೊಂದಿರುವ ನಮ್ಮ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಕಲಿಕೆಗಾಗಿ ಹೋಗಬೇಕಿತ್ತು’ ಎಂದು ಹೇಳಿದರು.
‘ಕಾಲೇಜಿಗೆ ಅಗತ್ಯವಿರುವ ಎಲ್ಲ ಆಧುನಿಕ ಪ್ರಯೋಗಾಲಯಗಳನ್ನು ನಾವು ಸ್ಥಾಪಿಸಿದ್ದೇವೆ. ಪ್ರಾಯೋಗಿಕ ತರಗತಿಗಳಿಗೆ ಭೂಮಿ ಸಹ ಹೊಂದಿದ್ದೇವೆ. ಶೇ 50ರಷ್ಟು ಪಠ್ಯಕ್ರಮ ಪ್ರಾಯೋಗಿಕ ಆಧಾರಿತವಾಗಿದೆ’ ಎಂದರು.
‘ವಿವಿಧ ಬೆಳೆಗಳ ಕುರಿತ ಅಧ್ಯಯನ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಾಗಿ ರೈತರ ಸುಮಾರು 800 ಎಕರೆ ಭೂಮಿ ಗುರುತಿಸಿದ್ದೇವೆ. ಪ್ರಯೋಗಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಹೇಳಿದರು.
‘ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಆರು ತಿಂಗಳು ಪ್ರಾಯೋಗಿಕ ಶಿಕ್ಷಣ ನೀಡಲಾಗುವುದು. ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ತಾವು ದತ್ತು ಪಡೆದ ಮನೆಗಳಲ್ಲಿ ಉಳಿದು, ಕೃಷಿ ವಲಯದ ನಿರ್ವಹಣೆಗಾಗಿ ಬೀಜ ಸಂಸ್ಕರಣೆಯಿಂದ ಪ್ಯಾಕಿಂಗ್‌ವರೆಗಿನ ತರಬೇತಿ ಪಡೆಯುತ್ತಾರೆ’ ಎಂದರು.
‘ಕೃಷಿ ಕಾಲೇಜು 32 ವಿಭಾಗಗಳನ್ನು ಹೊಂದಿದ್ದು ಉತ್ತಮ ಪ್ರಯೋಗಶಾಲೆ ಇದೆ. ಸದ್ಯ ಮತ್ತಿಕೊಪ್ಪದಲ್ಲಿರುವ ಶೈಕ್ಷಣಿಕ ಕ್ಷೇತ್ರಗಳನ್ನು ಬಳಸಿಕೊಳ್ಳಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದರು.
‘ಕೃಷಿ ವಲಯಕ್ಕೆ ಅಗತ್ಯವಿರುವ ಎಲ್ಲ ಕೋರ್ಸ್‌ಗಳ ಅಗತ್ಯಗಳನ್ನು ಪೂರೈಸಲು ನಾವು ಬಯಸುತ್ತೇವೆ. ಹಾಗಾಗಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಆರಂಭಿಸಲು ಪ್ರಯತ್ನ ನಡೆಸಿದ್ದೇವೆ. ಇದು ಬೀದರ್‌ನ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.