ADVERTISEMENT

ಕೋರೆ ಬಿಟ್ಟ ಕುರ್ಚಿ ಯಾರ ಪಾಲಿಗೆ?

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಪ್ರಭಾಕರ ಕೋರೆ: ಜಿಲ್ಲೆಯಲ್ಲಿ ತೀವ್ರ ಚರ್ಚೆ

ಸಂತೋಷ ಈ.ಚಿನಗುಡಿ
Published 24 ಜನವರಿ 2026, 2:40 IST
Last Updated 24 ಜನವರಿ 2026, 2:40 IST
ಮಹಾಂತೇಶ ಕವಟಗಿಮಠ
ಮಹಾಂತೇಶ ಕವಟಗಿಮಠ   

ಬೆಳಗಾವಿ: ಕೆೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನದಿಂದ ಪ್ರಭಾಕರ ಕೋರೆ ಅವರು ಏಕಾಏಕಿ ಹಿಂದೆ ಸರಿದಿದ್ದಾರೆ. ಇದು ಸಂಸ್ಥೆಯ ಸದಸ್ಯರು ಮಾತ್ರವಲ್ಲ; ಜಿಲ್ಲೆ ಜನರಲ್ಲೂ ಅಚ್ಚರಿ ಮೂಡಿಸಿದೆ. ವಿಶ್ವಮಟ್ಟದಲ್ಲಿ ಬೆಳೆದ ಮಹಾನ್‌ ಸಂಸ್ಥೆಗೆ ಮುಂದಿನ ಸಾರಥಿ ಯಾರು ಎಂಬ ಪ್ರಶ್ನೆ ಈಗ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಕಳೆದ 42 ವರ್ಷಗಳಿಂದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ದಾಖಲೆ ಆಡಳಿತ ನಡೆಸಿದ ಪ್ರಭಾಕರ ಕೋರೆ. ಅವರ ಅವಧಿಯಲ್ಲಿ ಸಂಸ್ಥೆಯ ‘ಸುವರ್ಣ ಯುಗ’ ಎಂದೇ ಸದಸ್ಯರು ಪರಿಗಣಿಸುತ್ತಾರೆ. ಉತ್ತರ ಕರ್ನಾಟಕದ ಮಕ್ಕಳ ಶಿಕ್ಷಣಕ್ಕಾಗಿ  ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆಯ ಶತಮಾನೋತ್ಸವ ದಾಟಿದೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ಬೃಹತ್‌ ಆಸ್ಪತ್ರೆಗಳನ್ನು ಹೊಂದಿದ ಸಂಸ್ಥೆಯ ಬಜೆಟ್‌ ₹3 ಸಾವಿರ ಕೋಟಿ ದಾಟಿದೆ. ಇಂಥ ಸಂಸ್ಥೆಯನ್ನು ಪ್ರಭಾಕರ ಕೋರೆ ಅವರಷ್ಟೇ ಸಮರ್ಥವಾಗಿ ಮುನ್ನಡೆಸುವುದು ಸವಾಲೇ ಸರಿ.

ಕಾರ್ಯಾಧ್ಯಕ್ಷರಾಗಲು ಆಡಳಿತ ಮಂಡಳಿಗೆ ಆಯ್ಕೆಯಾಗುವುದು ಕಡ್ಡಾಯ. ಆಡಳಿತ ಮಂಡಳಿಯ 15 ಸದಸ್ಯರಲ್ಲಿ ಪ್ರಭಾಕರ ಕೋರೆ ಅವರ ಹೆಸರು ಇಲ್ಲ. ಅವರು ತಮ್ಮ ಕುರ್ಚಿಯಿಂದ ದೂರ ಸರಿದಿದ್ದಾರೆ ಎಂಬುದನ್ನು ಸದಸ್ಯರ ಪಟ್ಟಿಯೇ ಖಾತ್ರಿಪಡಿಸಿದೆ. 15 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಗಿದೆ.

ADVERTISEMENT

ಯಾರಿದ್ದಾರೆ ಕಣದಲ್ಲಿ?: ಪ್ರಭಾಕರ ಕೋರೆ ಅವರ ಬಳಿಕ ಪ್ರಭಾವಿ ಹಿಡಿತ ಸಾಧಿಸಿರುವ ಮಹಾಂತೇಶ ಕವಟಗಿಮಠ ಅವರೇ ಮುಂದಿನ ಕಾರ್ಯಾಧ್ಯಕ್ಷ ಆಗುತ್ತಾರೆ ಎಂಬ ಸಂಗತಿ ಹಲವು ಬಾರಿ ಚರ್ಚೆಗೆ ಬಂದಿದೆ. ಖುದ್ದು ಕೋರೆ ಅವರೂ ವೇದಿಕೆಗಳಲ್ಲಿ ಈ ಮಾತಿನ ಮೂಲಕ ಚಟಾಕಿ ಹಾರಿಸಿದ್ದಾರೆ.

‘ಮಹಾಂತೇಶ ಈಗಾಗಲೇ ಹೊಸ ಅಂಗಿ ಹೊಲಿಸಿದ್ದಾನೆ’ ಎಂಬ ಕೋರೆ ಅವರ ಮಾತು ತಮಾಷೆಯಾದರೂ ಮುನ್ಸೂಚನೆಯಿಂದ ಕೂಡಿದೆ ಎಂದು ಸಂಸ್ಥೆಯ ಹಿರಿಯರು ವಿಶ್ಲೇಷಿಸುತ್ತಾರೆ. ಮೇಲಾಗಿ, ಕವಟಗಿಮಠ ಅವರ ತಂದೆಯೂ ಇದೇ ಸಂಸ್ಥೆಯಲ್ಲಿದ್ದರು.

ಜತೆಗೆ, ಪ್ರಭಾಕರ ಕೋರೆ ಅವರ ಪುತ್ರ ಅಮಿತ್‌ ಹಾಗೂ ಪುತ್ರಿ ಪ್ರೀತಿ ಅವರ ಹೆಸರಗಳೂ ಈ ಸ್ಥಾನಕ್ಕೆ ಕೇಳಿಬಂದಿವೆ. ಪುತ್ರ ಅಥವಾ ಪುತ್ರಿಯನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೇರಿಸಿ, ಪ್ರಭಾಕರ ಕೋರೆ ಅವರು ಬೆನ್ನೆಲುಬಾಗಿ ನಿಲ್ಲುತ್ತಾರೆಯೇ ಎಂಬುದು ಸಂಸ್ಥೆಯಲ್ಲಿ ಸದ್ಯಕ್ಕೆ ಚರ್ಚೆಯಲ್ಲಿರುವ ಸಂಗತಿ.

ಬೈಲಹೊಂಗಲ ಶಾಸಕರೂ ಆದ, ದಶಕಗಳಿಂದ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದ ಮಹಾಂತೇಶ ಕೌಜಲಗಿ ಅವರಿಗೂ ಸಂಸ್ಥೆಯಲ್ಲಿ ಪ್ರಾಧಾನ್ಯತೆ ಹೆಚ್ಚಿದೆ. ಹಾಗಾಗಿ, ಅಧ್ಯಕ್ಷ ಸ್ಥಾನದಿಂದ ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ‘ಜಂಪ್‌’ ಆಗುತ್ತಾರೆಯೇ? ಎಂಬ ಪ್ರಶ್ನೆಯೂ ಕಾಡುತ್ತಿದೆ.

ಮೂವರು ಹೊಸ ಸದಸ್ಯರು: ಪ್ರಭಾಕರ ಕೋರೆ ಅವರ ಸ್ಥಾನಕ್ಕೆ ಪುತ್ರಿ ಪ್ರೀತಿ, ಶಂಕರ ಮುನವಳ್ಳಿ ಅವರ ಸ್ಥಾನಕ್ಕೆ ಪುತ್ರ ಮಂಜುನಾಥ, ಶ್ರೀಶೈಲ ಮೆಟಗುಡ್‌ ಅವರ ಸ್ಥಾನಕ್ಕೆ ಪುತ್ರ ವಿಜಯ ಹೊಸದಾಗಿ ಆಯ್ಕೆಯಾಗಿದ್ದಾರೆ. ಉಳಿದ 12 ಮಂದಿ ಮರು ಆಯ್ಕೆಗೊಂಡಿದ್ದಾರೆ. ಅವರಲ್ಲಿ ಯಾರಿಗೆ ಕಾರ್ಯಾಧ್ಯಕ್ಷ ಪಟ್ಟ ದೊರೆಯಲಿದೆ ಎಂಬುದರತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ.

ಪ್ರಭಾಕರ ಕೋರೆ

ಸಾಧನೆಯ ಉತ್ತುಂಗದಲ್ಲಿ ಕೋರೆ

ಕೇವಲ 38 ವರ್ಷ ವಯಸ್ಸಿನಲ್ಲಿಯೇ ಮೊದಲ ಅವಧಿಯಲ್ಲೇ ಕಾರ್ಯಾಧ್ಯಕ್ಷರಾದವರು ಪ್ರಭಾಕರ ಕೋರೆ. ನಾಲ್ಕು ದಶಕಗಳಲ್ಲಿ 50 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿಕ್ಷಣದ ಜತೆಗೆ ಆರೋಗ್ಯ ಕೃಷಿ ಸಾಹಿತ್ಯ ಸಹಕಾರ ಕ್ಷೇತ್ರಗಳಲ್ಲೂ ಅವರದು ದೊಡ್ಡ ಸಾಧನೆ. ವಿಶ್ವಮಟ್ಟದಲ್ಲಿ ಅವರಿಗೆ ಇರುವ ದೊಡ್ಡ ಸಂಪರ್ಕಗಳು ದೂರದೃಷ್ಟಿ ಮತ್ತು ಭವಿಷ್ಯದ ಬಗ್ಗೆ ಇದ್ದ ಮುನ್ನೋಟವೇ ಅವರನ್ನು ಈ ಸ್ಥಾನಕ್ಕೇರಿಸಿದೆ ಎಂಬದು ಅವರ ಆಪ್ತರ ಅಭಿಮತ. ಶೈಕ್ಷಣಿಕ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್‌ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. 2008ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ 2013ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳು ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. ನ್ಯೂಯಾರ್ಕ್‌ನ ವೀರಶೈವ ಸಮಾಜ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿತು. 2015ರಲ್ಲಿ ಮಲೇಶಿಯಾದ ಯು.ಎಸ್.ಎಂ. ವಿ.ವಿ. ಗೌರವ ಡಾಕ್ಟರೇಟ್‌ ನೀಡಿತು. 2013ರಲ್ಲಿ ಭಾರತದ ಕೈಗಾರಿಕಾ ದಿಗ್ಗಜ ಶ್ರೀ ರತನ್ ಟಾಟಾ ಅವರು ಹುಬ್ಬಳ್ಳಿಯಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.