ADVERTISEMENT

ಕೋರೆ ಜನ್ಮದಿನ: ಉಚಿತ ಹೃದ್ರೋಗ ಚಿಕಿತ್ಸೆ

ಕೆಎಲ್‌ಇ ಆಸ್ಪತ್ರೆಯಲ್ಲಿ 100 ಮಂದಿಗೆ ಆಂಜಿಯೊಗ್ರಾಫಿ, 25 ಆಂಜಿಯೊಗ್ರಾಮ್‌ ಮಾಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:19 IST
Last Updated 29 ಜುಲೈ 2024, 16:19 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ, ಇಲ್ಲಿನ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 100 ಜನರಿಗೆ ಆಂಜಿಯೊಗ್ರಫಿ ಹಾಗೂ 25 ಹೃದ್ರೋಗಿಗಳಿಗೆ ಆಂಜಿಯೊಪ್ಲಾಸ್ಟಿಯನ್ನು ಉಚಿತವಾಗಿ ಮಾಡಲಾಗುವುದು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್‌ ಡಾ.ಎಂ. ದಯಾನಂದ ತಿಳಿಸಿದರು.

‘ಆರ್ಥಿಕವಾಗಿ ಹಿಂದುಳಿದವರು ಮಾತ್ರ ಇದನ್ನು ಬಳಸಿಕೊಳ್ಳಲು ಸಾಧ್ಯ. ಈಗಾಗಲೇ ಸರ್ಕಾರದ ವೈದ್ಯಕೀಯ ಸವಲತ್ತು, ವಿಮೆ ಅನುಕೂಲ ಇದ್ದವರಿಗೆ ಬರುವುದಿಲ್ಲ. ಅಂಥವರಿಗೆ ಆಯಾ ವಿಮಾ ಯೋಜನೆಗಳ ಅಡಿಯೇ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಪ್ರಭಾಕರ ಕೋರೆ ಅವರ ಜನ್ಮದಿನದ ಸಂಭ್ರಮದಲ್ಲಿ ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ಈ ಸೇವೆ ನೀಡಲಾಗುತ್ತಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಚಿಕಿತ್ಸೆ ದೊರೆಯಲಿದೆ. ರೋಗಿಗಳಿಗೆ ಕಡಿಮೆ ರಕ್ತದೊತ್ತಡ, ಕಿಡ್ನಿ, ಲೀವರ್‌ ಸಮಸ್ಯೆ, ನರರೋಗ ಸಮಸ್ಯೆಗಳಿದ್ದರೆ ಚಿಕಿತ್ಸೆಗೆ ಒಳಪಡಿಸಲಾಗುವುದಿಲ್ಲ. ಜತೆಗೆ ಒಂದು ಸ್ಟೆಂಟ್‌ ಮಾತ್ರ ಉಚಿತವಾಗಿ ಅಳವಡಿಸಲಾಗುವುದು. ಹೆಚ್ಚುವರಿ ಸ್ಟಂಟ್‌ಗಳ ಅವಶ್ಯವಿದ್ದಲ್ಲಿ ಬಿಲ್‌ ಭರಿಸಬೇಕಾಗುತ್ತದೆ. ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪ್ಯಾನ್‌ಕಾರ್ಡ್‌ ಕಾರ್ಡ್‌ ಸಲ್ಲಿಸುವುದು ಕಡ್ಡಾಯ’ ಎಂದರು.

ADVERTISEMENT

‘ಕೊರೊನಾ ಬಳಿಕ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವ್ಯಾಕ್ಸಿನ್‌ ಹಾಕಿಸಿಕೊಂಡ ಪರಿಣಾಮ ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದೆ ಎಂದು ಕೆಲವರು ಹೇಳುತ್ತಿರುವುದು ಸರಿಯಲ್ಲ. ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಕ್ಕೂ, ಬಿಪಿ ಹೆಚ್ಚು–ಕಡಿಮೆ ಆಗುವುದನ್ನೂ ಸಂಬಂಧವಿಲ್ಲ. ನಮ್ಮ ಜೀವನಶೈಲಿ ಹಾಗೂ ಚಟಗಳಿಂದ ಹೀಗಾಗುತ್ತದೆ’ ಎಂದು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸಂಜಯ ಪೋರವಾಲ್ ಪ್ರತಿಕ್ರಿಯಿಸಿದರು.

ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಸುರೇಶ ವಿ. ಪಟ್ಟೇದ, ಡಾ.ಆರ್.ಬಿ. ನೇರ್ಲಿ, ಡಾ.ರಾಜಶೇಖರ ಸೋಮನಟ್ಟಿ, ಡಾ.ಸಮೀರ ಅಂಬರ, ಡಾ.ಎಂ.ಆರ್.ಪ್ರಸಾದ, ಡಾ.ವಿಶ್ವನಾಥ ಹೆಸರೂರ ಉಪಸ್ಥಿತರಿದ್ದರು.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 0831-2473777, ವಿಸ್ತರಣಾ ಸಂಖ್ಯೆ: 1343, ಶಿವಾಜಿ ಮೊ- 9972337346, ಶಿವಾನಂದ - 9008443309 ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಆಗಸ್ಟ್‌ ತಿಂಗಳಲ್ಲಿ ಉಚಿತ ಹೃದ್ರೋಗ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ನೋಂದಣಿ ಆರಂಭವಾಗಿದೆ ಕರ್ನಲ್‌ ಡಾ.ಎಂ. ದಯಾನಂದ ವೈದ್ಯಕೀಯ ನಿರ್ದೇಶಕ ಕೆಎಲ್‌ಇ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.