ADVERTISEMENT

ಗೋಕಾಕ | ಕೊಳವಿ ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ

1924ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ ಹಳ್ಳಿಯ ಶಾಲೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 1:57 IST
Last Updated 11 ಅಕ್ಟೋಬರ್ 2025, 1:57 IST
ಗೋಕಾಕ ತಾಲ್ಲೂಕಿನ ನೂರು ವಸಂತಗಳನ್ನು ಪೂರೈಸಿದ ಕೊಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗೋಕಾಕ ತಾಲ್ಲೂಕಿನ ನೂರು ವಸಂತಗಳನ್ನು ಪೂರೈಸಿದ ಕೊಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಗೋಕಾಕ: ತಾಲ್ಲೂಕಿನ ಕೊಳವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವಸಂತಗಳನ್ನು ಪೂರೈಸಿದ್ದು, ಅ.11 ಮತ್ತು 12ರಂದು ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸಲು ಗ್ರಾಮದ ಜನ ಮತ್ತು ಹಳೆಯ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದರು.

1920ರಲ್ಲ ಸ್ವಾತಂತ್ರ್ಯ ಹೋರಾಟ ಒಂದು ಕಡೆಯಾದರೆ, ಬ್ರಿಟಿಷ್‌ ಸರ್ಕಾರದ ಆಡಳಿತದ ವೈಖರಿ ಇನ್ನೊಂದೆಡೆ. ಅಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ವಿದ್ಯೆ ಕೊಡಿಸಬೇಕು ಎಂದು ಗ್ರಾಮದ ಕೆಲವು ಪ್ರಜ್ಞಾವಂತ ಜನರು ಸಂಕಲ್ಪ ಮಾಡಿದರು.

1924–25ರಲ್ಲಿ ಗ್ರಾಮದ ಬೀರಸಿದ್ಧೇಶ್ವರ ದೇವಸ್ಥಾನದ ಪೌಳಿಯಲ್ಲಿ ‘ಬಿನ್ನೆತ್ತೆ’ ಶಾಲೆ ಪ್ರಾರಂಭಿಸಿದರು. ನಂತರ ದೊಡ್ಡಬಿನ್ನೆತ್ತೆಯಿಂದ ಒಂದನೇ ತರಗತಿಗಳನ್ನು ಶುರು ಮಾಡಿದರು. ಮೂರು ದಶಕಗಳ ಕಾಲ ದೇವಸ್ಥಾನಗಳೇ ಶಾಲೆಗಳಾಗಿದ್ದವು ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ.

ADVERTISEMENT

ಶಾಪೂರ ಮಾಸ್ತರ್, ತೋಪಖಾನೆ, ಬಾಳಪ್ಪ ಡೋಂಗರೆ, ದೇಶನೂರ, ಮಲ್ಲಪ್ಪ ಹಟ್ಟಿಗೌಡರ ಸೇರಿದಂತೆ ಇನ್ನು ಅನೇಕ ಶಿಕ್ಷಕರು ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳಿಗೆ ಪಾಠ ಮಾಡಿರುವುದನ್ನು ಗ್ರಾಮದ ಜನ ಸ್ಮರಿಸುತ್ತಾರೆ.

ಶಾಲಾ ಕಟ್ಟಡ: 1955ರಲ್ಲಿ ಸರ್ಕಾರದಿಂದ ಈಗಿರುವ ಜಾಗಾದಲ್ಲಿ ಒಂದು ಕೊಠಡಿ ನಿರ್ಮಾಣವಾಯಿತು. ಗ್ರಾಮದ ಶಿಕ್ಷಣ ಪ್ರೇಮಿ ಸ್ವಾತಂತ್ರ್ಯ ಯೋಧ ಬಾಳಪ್ಪ ರುದ್ರಪ್ಪ ಅಂಗಡಿ ಅವರು 1962ರಲ್ಲಿ ತಮ್ಮ ಸ್ವಂತ ಜಮೀನು ಮಾರಾಟ ಮಾಡಿ, ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಆ ವೇಳೆ ಪ್ರಧಾನ ಶಿಕ್ಷಕರಾಗಿದ್ದ ಸ್ವಾತಂತ್ರ್ಯ ಯೋಧ ಮಲ್ಲಪ್ಪ ಬಾ. ಹಟ್ಟಿಗೌಡರ ಮತ್ತು ಕಾರ್ಯದರ್ಶಿ ಸ್ವಾತಂತ್ರ್ಯ ಯೋಧ ಬಾಳಗೌಡ ಪಾಟೀಲ ಮತ್ತು ಗ್ರಾಮದ ಹಿರಿಯರು ಸೇರಿ ಅವಶ್ಯವಿರುವಷ್ಟು ಕೊಠಡಿಗಳನ್ನು ನಿರ್ಮಿಸಿದರು.

ಹೂಲಿಕಟ್ಟಿ, ಮಕ್ಕಳಗೇರಿ, ಕೈತಾಳ, ಹೊಸೂರು, ಗಾಂಧಿನಗರ, ಬೆಣಚಿನಮರಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ಮಕ್ಕಳ ಕಲಿಕೆಗೆ ಕೊಳವಿ ಶಾಲೆ ವಿದ್ಯಾಕಾಶಿ ಆಗಿತ್ತು’ ಎಂದು ಈ ಶಾಲೆಯ ನಿವೃತ್ತ ಶಿಕ್ಷಕ ಬಿ.ಎಂ. ಶಿವಾಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2012ರಲ್ಲಿ ಈ ಶಾಲೆಯಲ್ಲಿ 8ನೇ ತರಗತಿ ಪ್ರಾರಂಭಗೊಂಡಿದೆ. ಸದ್ಯ 490 ವಿದ್ಯಾರ್ಥಿಗಳಿದ್ದು 14 ಶಿಕ್ಷಕರಿದ್ದಾರೆ. 1ರಿಂದ 5ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಇದೆ. ಮೈದಾನ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಶೌಚಾಲಯ ಸೌಲಭ್ಯ ಹೊಂದಿದೆ. ಇತಿಹಾಸ ಪುಟದಲ್ಲಿ ಹೊನ್ನಕೊಳವಿಯಾಗಿದ್ದ ಗುಡ್ಡಗಳ ಮಧ್ಯದಲ್ಲಿದ್ದ ಕೊಳವಿ ಗ್ರಾಮವು ಇಂದು ವಿದ್ಯಾಕೊಳವಿ ಎನಿಸಿಕೊಂಡಿದೆ ಎಂದು ಮುಖ್ಯ ಶಿಕ್ಷಕ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಎಸ್. ನಂದೆಪ್ಪನವರ ತಿಳಿಸಿದರು.

ಶಾಲೆ ಪ್ರಗತಿಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಮತ್ತು ಗ್ರಾಮ ಪಂಚಾಯಿತಿಯವರ ಕೊಡುಗೆಯು ಅಪಾರವಿದೆ ಎಂದು ಬಿಇಒ ಜಿ.ಬಿ. ಬಳಿಗಾರ ತಿಳಿಸಿದರು.

ಕೊಳವಿ ಸರ್ಕಾರಿ ಶಾಲೆಯು ಬಹಳಷ್ಟು ಮಕ್ಕಳಿಗೆ ಅಕ್ಷರ ಕಲಿಸಿ ಭವಿಷ್ಯ ನಿರ್ಮಿಸಿದೆ. ಇಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ದೊಡ್ಡ ಹುದ್ದೆಗಳಲ್ಲಿದ್ದಾರೆ
ಬಸವರಾಜ ಹಟ್ಟಿಗೌಡರ ಹಳೆಯ ವಿದ್ಯಾರ್ಥಿ
ಶತಮಾನೋತ್ಸವಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೈನಿಕರು ಶಿಕ್ಷಕರು ಗ್ರಾಮಸ್ಥರೆಲ್ಲ ಅಂದಾಜು ₹30 ಲಕ್ಷ ದೇಣಿಗೆ ಕೂಡಿಸಿ ಸುಧಾರಿಸಿದ್ದಾರೆ
ಬಾಳಯ್ಯ ಪೂಜಾರಿ ಶಾಲೆಯ ಹಳೆಯ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.