ADVERTISEMENT

ಕೋವಿಡ್ ಕೇಂದ್ರ: 66 ರೋಗಿಗಳು ಗುಣಮುಖ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:20 IST
Last Updated 18 ಸೆಪ್ಟೆಂಬರ್ 2020, 6:20 IST
ನಿಪ್ಪಾಣಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‍ನಲ್ಲಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಣೇಶನ ವಿಗ್ರಹಕ್ಕೆ ಪೂಜೆ ನೆರವೇರಿಸುತ್ತಿರುವುದು
ನಿಪ್ಪಾಣಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‍ನಲ್ಲಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಣೇಶನ ವಿಗ್ರಹಕ್ಕೆ ಪೂಜೆ ನೆರವೇರಿಸುತ್ತಿರುವುದು   

ನಿಪ್ಪಾಣಿ: ‘ಇಲ್ಲಿನ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‍ನಲ್ಲಿ ಆ.24 ರಂದು ಆರಂಭಿಸಿದ ಕೋವಿಡ್ ಕೇರ್ ಸೇಂಟರ್‌ನಲ್ಲಿ ಇಲ್ಲಿಯವರೆಗೆ 110 ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದು, 66 ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 14 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಮತ್ತು ಕೊಲ್ಹಾಪುರಕ್ಕೆ ಕಳುಹಿಸಲಾಗಿದ್ದು 32 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಆಯುಷ್ಮಾನ್ ಭಾರತ, ಸುವರ್ಣ ಕರ್ನಾಟಕ, ಸ್ಥಳೀಯ ವೈದ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‍ನಲ್ಲಿ ಆರಂಭಿಸಿದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನನಗೆ ಹಾಗೂ ನನ್ನ ಇಬ್ಬರು ಮಕ್ಕಳಿಗೆ ಕೋವಿಡ್‌ ದೃಢಪಟ್ಟ ನಂತರ ಕಳೆದ ಶನಿವಾರ ನನಗೆ ಮತ್ತೆ ಜ್ವರ ಕಾಣಿಸಿಕೊಂಡಿತು. ನಾನು ಬೆಳಗಾವಿ, ಬೆಂಗಳೂರು ನಂತಹ ದೊಡ್ಡ ನಗರಗಳಿಗೆ ಹೋಗದೆ ನನ್ನ ಕ್ಷೇತ್ರದ ಜನರು ಪಡೆಯುತ್ತಿರುವ ಈ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಗುಣಮುಖನಾಗಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಮುಂದಿನ ದಿನಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಲಿದ್ದಾರೆ ಎಂದು ತಿಳಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ಈ ಕೇಂದ್ರದಲ್ಲಿನ ವೈದ್ಯರು ಎಲ್ಲ ಸೋಂಕಿತರ ವೈಯಕ್ತಿಕ ಗಮನ ಹರಿಸಿ ಚಿಕಿತ್ಸೆ ನೀಡುತ್ತಿದ್ದು, ಸುಮಾರು 16 ಬೆಡ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ಚಿಕಿತ್ಸೆ ಹೊರತಾಗಿ ಇಲ್ಲಿನ ವಾತಾವರಣ ಮನೆಯಂತಿದ್ದು, ಇಲ್ಲಿ ದಿನನಿತ್ಯ ಸಂಗೀತ, ಮನೋರಂಜನೆಯ ಕಾರ್ಯಕ್ರಮಗಳು, ಪೂಜೆ, ಯೋಗ ಹೀಗೆ ಹಲವಾರು ಕಾರ್ಯ ಮಾಡುತ್ತಿರುವುದರಿಂದ ರೋಗಿಗಳು ಭಯವಿಲ್ಲದೆ ಸಮಯಕ್ಕೆ ಚಿಕಿತ್ಸೆಗೆ ಪಡೆದು ಗುಣಮುಖರಾಗಿ ಮರಳುತ್ತಿದ್ದಾರೆ ಎಂದರು.

ಡಾ. ಬಲರಾಮ ಜಾಧವ, ಡಾ. ಸಂಗೀತಾ ದೇಶಪಾಂಡೆ, ಡಾ. ಜ್ಯೋತಿಬಾ ಜಾಧವ ಕೋವಿಡ್ ಕೇಂದ್ರದ ಕುರಿತು ಮಾಹಿತಿ ನೀಡಿದರು. ಡಾ. ಅಹ್ಮದರಾಜ್ ಕಪಟಾಲ, ಡಾ. ರಾಜೇಶ್ ಶಿರ್ಗನ್ನವರ್, ಡಾ. ಸಂದೀಪ ಚಿಖಲೆ, ಬಿಇಓ ರೇವತಿ ಮಠದ, ನಗರಸಭೆ ಸದಸ್ಯ ಜಯವಂತ ಭಾಟಲೆ, ರಾಜು ಗುಂಡೇಶಾ, ಆಶಾ ಟವಳೆ, ನೀತಾ ಬಾಗಡಿ, ಪ್ರಕಾಶ ಶಿಂಧೆ, ಮಧುಕರ ಪಾಟೀಲ, ವಿಜಯ ಟವಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ, ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.