ಸಂಕೇಶ್ವರ: ಸಂಕೇಶ್ವರ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫೈವ್ ಸ್ಟಾರ್ ಅಸೋಶಿಯೇಷನ್ ಮತ್ತು ಕಲಾಕೌಸ್ತುಭ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಡಸೋಸಿಯ ದುರದುಂಡಿಶ್ವರ ಮಠದ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, 'ಕಲೆ, ಸಾಹಿತ್ಯ, ಸಂಗೀತ, ನಾಡು-ನುಡಿಯ ಸೇವೆ, ಪತ್ರಿಕಾ ರಂಗ, ಸಾರ್ವಜನಿಕ ಸೇವೆ, ಕೃಷಿ, ಉದ್ಯಮ, ಚಿತ್ರಕಲೆ, ರಂಗಭೂಮಿ, ಮಹಿಳಾ ಸಬಲೀಕರಣ, ದಲಿತರ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಸಮಾಜಸೇವೆ ಮಾಡುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಕಲಾಕೌಸ್ತುಭ ಸಂಸ್ಥೆ ಮತ್ತು ಫೈವ್ ಸ್ಟಾರ್ ಅಸೋಶಿಯೇಷನ್ ಸಂಘಟನೆಗಳು ಸೇರಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ' ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯ ಪತ್ರಿಕಾ ಛಾಯಾಗ್ರಾಹಕ ಏಕನಾಥ ಅಗಸಿಮನಿ, ಖಾನಾಪುರದ ಪತ್ರಕರ್ತ ಪ್ರಸನ್ನ ಕುಲಕರ್ಣಿ, ಬೀಡಿ ಗ್ರಾಮದ ಯುವ ಉದ್ಯಮಿ ಶಿವಾ ಬಾಗವಾಡಕರ, ಗಡಿನಾಡು ಹಿತರಕ್ಷಣಾ ಸಮಿತಿ ಖಾನಾಪುರ ತಾಲೂಕು ಘಟಕದ ಅಧ್ಯಕ್ಷ ರಾಜು ಖಾತೇದಾರ, ಕುಂದಗೋಳದ ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾಜರ್ುನ ಸ್ವಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ 25 ಸಾಧಕರಿಗೆ ಶ್ರೀಗಳು ಹಾಗೂ ಗಣ್ಯರು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಯರನಾಳದ ಬ್ರಹ್ಮಾನಂದ ಶ್ರೀಗಳು, ಹಿತಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಹಿರಿಯ ಸಾಹಿತಿ ಡಾ.ಅಜನಾಳ ಭೀಮಾಶಂಕರ ಸಂಕೇಶ್ವರ ಪುರಸಭೆ ಅಧ್ಯಕ್ಷೆ ಸೀಮಾ ಹತನೂರಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕಳ್ಳಿ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ ಮತ್ತಿತರರು ಭಾಗವಹಿಸಿದ್ದರು. ಕಲಾ ಕೌಸ್ತುಭ ಸಂಸ್ಥೆಯ ಅಧ್ಯಕ್ಷ ಗೋವಿಂದ ಮೇಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೈವ್ ಸ್ಟಾರ್ ಅಸೊಸಿಯೇಷನ್ ಸಂಸ್ಥಾಪಕ ವೀರೇಂದ್ರ ಚೌಗಲಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.