ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ತಗ್ಗಿದ್ದರಿಂದ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಯ ಹೊರ ಹರಿವು ಮಂಗಳವಾರ 48,454 ಕ್ಯೂಸೆಕ್ ನಷ್ಟು ಕಡಿಮೆಯಾಗಿದೆ. ನಿನ್ನೆ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ 1,47,097 ಕ್ಯೂಸೆಕ್ ಇದ್ದ ಹೊರ ಹರಿವು, ಇಂದು 98,643 ಕ್ಯೂಸೆಕ್ ನಷ್ಟು ಇದೆ. ಹೀಗಾಗಿ ಕೃಷ್ಣಾ ಹಾಗೂ ಉಪನದಿಗಳ ತೀರದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಯ ಹೊರ ಹರಿವು 77,875 ಕ್ಯೂಸೆಕ್ ಇದ್ದು, ತಾಲ್ಲೂಕಿನ ಸದಲಗಾ ಪಟ್ಟಣದ ಬಳಿಯಲ್ಲಿ ದೂಧಗಂಗಾ ನದಿಗೆ 20,768 ಕ್ಯೂಸೆಕ್ ಇದೆ. ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಕಾಳಜಿ ಕೇಂದ್ರ ಹಾಗೂ ಸುರಕ್ಷಿತ ಸ್ಥಳಕ್ಕೆ ಬಂದಿದ್ದ ನದಿತೀರದ ನಿವಾಸಿಗಳು ತೋಟದ ವಸತಿಗಳಿಗೆ ಮರಳಿದ್ದಾರೆ.
ನದಿ ನೀರಿನಲ್ಲಿ ಇಳಿಮುಖವಾಗಿದ್ದರಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ನದಿಯ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ಹಾದು ಹೋಗುವ ಸೇತುವೆ ಮಂಗಳವಾರ ಸಂಚಾರಕ್ಕೆ ಮುಕ್ತವಾಗಿದ್ದು, ಲಾರಿ, ಬಸ್ಸು ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ನಿರ್ಭಂಧಿಸಲಾಗಿದೆ. ವೇದಗಂಗಾ ನದಿಯ ಭೋಜ-ಕುನ್ನೂರ ಕಿರು ಸೇತುವೆಯು ಸಂಚಾರಕ್ಕೆ ಮುಕ್ತವಾಗಿದೆ.
ತಾಲ್ಲೂಕಿನ ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ-ಭೋಜ ಮುಂತಾದ ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.