ADVERTISEMENT

ಚಿಕ್ಕೋಡಿ | ಕೃಷ್ಣಾ ಹರಿವು: 2.64 ಲಕ್ಷ ಕ್ಯೂಸೆಕ್ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:42 IST
Last Updated 23 ಆಗಸ್ಟ್ 2025, 2:42 IST
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿರುವ ದೂಧಗಂಗಾ ನದಿಯ ಸದಲಗಾ - ಬೋರಗಾಂವ ಸೇತುವೆ ಮುಳುಗಡೆಯಾಗಿದೆ
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿರುವ ದೂಧಗಂಗಾ ನದಿಯ ಸದಲಗಾ - ಬೋರಗಾಂವ ಸೇತುವೆ ಮುಳುಗಡೆಯಾಗಿದೆ   

ಚಿಕ್ಕೋಡಿ: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದ್ದರೂ ಉಪ ವಿಭಾಗದಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ನೀರಿನ ಹರಿವಿನ ಪ್ರಮಾಣ ಶುಕ್ರವಾರ 2.64 ಲಕ್ಷ ಕ್ಯೂಸೆಕ್ ಏರಿಕೆಯಾಗಿದೆ. ಹೀಗಾಗಿ ನದಿ ತೀರದ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವುದನ್ನು ಮುಂದುವರೆಸಿದ್ದಾರೆ.

ಕೃಷ್ಣಾ ನದಿಯ ಹರಿವು ಗುರುವಾರ ಸಂಜೆ ವೇಳೆಗೆ 2,64,223 ಕ್ಯೂಸೆಕ್ ನಷ್ಟು ಹೆಚ್ಚಳವಾಗಿದೆ. ಹೀಗಾಗಿ 12ಕ್ಕೂ ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ. ಹೀಗಾಗಿ ಕರ್ನಾಟಕ-ಮಹಾರಾಷ್ಟ್ರದ ನಡುವೆ ಜನರು ಸುತ್ತುಬಳಿಸಿಕೊಂಡು ಹೋಗಬೇಕಾಗಿದ್ದು, ಇನ್ನು ಕಿರು ಸೇತುವೆಗಳು ಜಲಾವೃತಗೊಂಡಿದ್ದರಿಂದ ಪರಸ್ಪರ ಗ್ರಾಮಗಳ ನಡುವೆ ಸಂಪರ್ಕ ದುಸ್ತರವಾಗಿದೆ.

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಉಪ ವಿಭಾಗದ ವಿವಿಧ ತಾಲ್ಲೂಕುಗಳಲ್ಲಿ 39 ಬೋಟ್ ಗಳನ್ನು ಕಾಯ್ದಿರಿಸಿದೆ. ಜಾನುವಾರುಗಳ ಸುರಕ್ಷತೆಗಾಗಿ 66 ಸುರಕ್ಷತಾ ಸ್ಥಳಗಳನ್ನು ಗುತುರಿಸಿದೆ. ಅಲ್ಲದೇ, ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು 141 ಕಾಳಜಿ ಕೇಂದ್ರಗಳನ್ನು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಕಾಗವಾಡ ತಾಲ್ಲೂಕುಗಳಲ್ಲಿ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ADVERTISEMENT

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜ್‌, ಸದಲಗಾ ಪಟ್ಟಣದ ಬಳಿಯಲ್ಲಿ ದೂಧಗಂಗಾ ನದಿಯ ಹೊರ ಹರಿವು 45,056 ಕ್ಯೂಸೆಕ್ ಇದ್ದು, ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಯು ಹೊರ ಹರಿವು 2,64,223 ಕ್ಯೂಸೆಕ್ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.