ADVERTISEMENT

ಕರವೇ ಕಾರ್ಯಕರ್ತರ ಅರೆಬೆತ್ತಲೆ ಹೋರಾಟ

ಹಿಡಕಲ್‌ ಜಲಾಶಯದ ನೀರು ಕೊಡದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:32 IST
Last Updated 30 ಮೇ 2025, 15:32 IST
ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ನೀಡಬಾರದು ಎಂದು ಆಗ್ರಹಿಸಿ, ಕರವೇ ಕಾರ್ಯಕರ್ತರು, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದರು  ಪ್ರಜಾವಾಣಿ ಚಿತ್ರ
ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ನೀಡಬಾರದು ಎಂದು ಆಗ್ರಹಿಸಿ, ಕರವೇ ಕಾರ್ಯಕರ್ತರು, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡಕೂಡದು, ಇದರ ಕಾಮಗಾರಿಯನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ನಗರದಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಕೂಡ ಮಾಡಲಾಯಿತು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ‘ನಮ್ಮ ನೀರು ನಮ್ಮ ಹಕ್ಕು’ ಎಂದು ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ರಾಣಿ ಚನ್ನಮ್ಮ ವೃತ್ತದವರೆಗೂ ಅರೆಬೆತ್ತಲೆ ಮೆರವಣಿಗೆ ಮಾಡಿದರು. ವೃತ್ತದಲ್ಲಿ ಅರ್ಧ ತಾಸು ಮಾನವ ಸರಪಳಿ ನಿರ್ಮಿಸಿ ಸಂಚಾರ ಬಂದ್‌ ಮಾಡಿದರು.

ADVERTISEMENT

ಟೈರ್‌ಗೆ ಬೆಂಕಿ ಹಚ್ಚಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ನೂಕಾಟ– ತಳ್ಳಾಟ ನಡೆಯಿತು. ಪೊಲೀಸರು ಕಾರ್ಯಕರ್ತರಿಂದ ಟೈರ್‌ ಕಸಿದುಕೊಂಡರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು, ಪೊಲೀಸರ ವಿರುದ್ಧವೂ ಧಿಕ್ಕಾರ ಕೂಗಿದರು.

‘ಈ ಹಿಂದೆ ಹೋರಾಟ ಮಾಡಿದ್ದರಿಂದ ಹಿಡಕಲ್‌ನಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕೆಗೆ ನೀರು ಸರಬರಾಜು ಮಾಡುವುದಕ್ಕಾಗಿ ಕೈಗೊಂಡ ಪೈಪ್‌ಲೈನ್‌ ಕಾಮಗಾರಿ ಸ್ಥಗಿತವಾಗಿತ್ತು. ಈಗ ಸರ್ಕಾರದಿಂದ ಅನುಮತಿ ಪಡೆದು ಮತ್ತೆ ಕಾಮಗಾರಿ ಆರಂಭಿಸಿದ್ದು ಸರಿಯಲ್ಲ. ತಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ದೀಪಕ ಕಿಡಿ ಕಾರಿದರು.

‘ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡದ ಕೈಗಾರಿಕೆಗಳಿಗೆ ಈಗಾಗಲೇ ನೀರು ಬಿಡಲಾಗುತ್ತಿದೆ. ಈಗ ಹಿಡಕಲ್‌ ಅಣೆಕಟ್ಟೆಯಿಂದಲೂ ಅಲ್ಲಿಗೆ ನೀರು ಬಿಡುತ್ತಿರುವುದು ಸರಿಯಲ್ಲ. ಮುಂದೆ ಇದು ಜಿಲ್ಲೆಯ ಜನರ ಕುಡಿಯುವ ನೀರಿನ ಬರ ತಂದೊಡ್ಡಲಿದೆ’ ಎಂದೂ ಹೇಳಿದರು.

‘ರಾಜ್ಯ ಸರ್ಕಾರ ಜಿಲ್ಲೆಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳೂ ಇದರ ಬಗ್ಗೆ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಬೇಕು’ ಎಂದೂ ಆಗ್ರಹಿಸಿದರು.

ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ನೀಡಬಾರದು ಎಂದು ಆಗ್ರಹಿಸಿ  ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು  ಪ್ರಜಾವಾಣಿ ಚಿತ್ರ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ರಸ್ತೆಯಲ್ಲೇ ಬ್ಯಾರಿಕೇಡ್‌ ಇಟ್ಟು ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲವರು ಬ್ಯಾರಿಕೇಡ್‌ ಹತ್ತಿ ಜಿಗಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸ್ಥಳಕ್ಕೆ ಬಂದು ಮನವಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.