ADVERTISEMENT

ಶಿಕ್ಷಣ ಹೊಂದಲು ಹಾಲುಮತ ಸಮಾಜಕ್ಕೆ ಸಲಹೆ

ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 14:24 IST
Last Updated 25 ಫೆಬ್ರುವರಿ 2021, 14:24 IST
ಕಾಗವಾಡ ತಾಲ್ಲೂಕು ಕೌಲಗುಡ್ಡ ಗ್ರಾಮದಲ್ಲಿ ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು
ಕಾಗವಾಡ ತಾಲ್ಲೂಕು ಕೌಲಗುಡ್ಡ ಗ್ರಾಮದಲ್ಲಿ ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು   

ಮೋಳೆ: ‘ಹಾಲುಮತ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.

ಕಾಗವಾಡ ತಾಲ್ಲೂಕು ಕೌಲಗುಡ್ಡ ಗ್ರಾಮದಲ್ಲಿ ಸಿದ್ಧಯೋಗ ಅಮರೇಶ್ವರ ಮಹಾರಾಜರು ಪ್ರಯತ್ನಿಸಿ ಪ್ರಾರಂಭಿಸಿದ್ದರಿಂದ ಸಿದ್ಧಗೊಂಡಿರುವ ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ನೂತನ 14 ಕೊಠಡಿಗಳ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಸ್ವಾಮೀಜಿಗಳು ತ್ಯಾಗಿಗಳು. ಎಲ್ಲರಿಗೂ ಒಳ್ಳೆಯದನ್ನು ಬಯಸುವವರು. ಅಮರೇಶ್ವರ ಮಹಾರಾಜರು ಶಿಕ್ಷಣ ಸಂಸ್ಥೆ ಕಟ್ಟಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶ್ರಮಿಸಿದ್ದಾರೆ. ಇಂತಹ ಕಾರ್ಯಕ್ಕೆ ಸ್ವಾಮೀಜಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ಮುಂದೆಯೂ ಕೊಡುತ್ತೇನೆ. ಹಾಲುಮತ ಸಮಾಜದವರಲ್ಲಿ ಶಿಕ್ಷಣದ ಕೊರತೆ ಇದ್ದು, ಅದನ್ನು ನೀಗಿಸಿಕೊಳ್ಳಬೇಕು’ ಎಂದರು.

ADVERTISEMENT

‘ಒಳ್ಳೆಯ ಶಿಕ್ಷಣ ಪಡೆದು ಪದವೀಧರರಾದರೆ ಉನ್ನತ ಸ್ಥಾನಗಳು ಕೈಬೀಸಿ ಕರೆಯುತ್ತವೆ. ನಾನೂ ಕಡುಬಡವ. ನನ್ನ ತಾಯಿ ಕಷ್ಟಪಟ್ಟು ಓದಿಸಿದ್ದರಿಂದ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ತಾಯಂದಿರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರನ್ನೇ ಆಸ್ತಿ ಮಾಡಬೇಕು’ ಎಂದು ತಿಳಿಸಿದರು.

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ‘ಆಸ್ತಿಯನ್ನು ಕಳವು ಮಾಡಲು ಸಾಧ್ಯವಿದೆ. ಆದರೆ, ವ್ಯಕ್ತಿಯಲ್ಲಿರುವ ಶಿಕ್ಷಣ, ಬುದ್ಧಿ ಹಾಗೂ ಕೌಶಲವನ್ನು ಯಾರೂ ಕದಿಯಲು ಆಗುವುದಿಲ್ಲ. ಇದನ್ನು ಅರಿತು ಸ್ವಾಮೀಜಿ ಮಾಡಿರುವ ಪ್ರಯತ್ನಕ್ಕೆ ನನ್ನ ಸಹಕಾರವಿದೆ. ಅಮರೇಶ್ವರ ಮಹಾರಾಜರು ಎಲ್ಲ ಸಮಾಜದವರ ಬಗ್ಗೆ ಇಟ್ಟಿರುವ ಕಾಳಜಿ ಅಭಿನಂದನಾರ್ಹ’ ಎಂದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಅಮರೇಶ್ವರ ಮಹಾರಾಜರು ಒಬ್ಬ ಸನ್ಯಾಸಿ. ಕೌಲಗುಡ್ಡ ಕುಗ್ರಾಮದಲ್ಲಿ ಇಂತಹ ಅದ್ಭುತ ಸಾಧನೆ ಮಾಡಿದ್ದಾರೆ. ಇದು ಇಲ್ಲಿನ ಜನರ ಪುಣ್ಯ. ಇದನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಹೊಸದುರ್ಗ ಕಾಗಿನೆಲೆ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಶಿರನಾಳ ಮಠದ ಸೋಮಲಿಂಗೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಜವಳಿ ಸಚಿವ ಶ್ರೀಮಂತ ಪಾಟೀಲ, ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಕೆ. ವಿರೂಪಾಕ್ಷಪ್ಪ, ಕೆ.ಇ. ಶಾಂತೇಶ, ಚಿದಾನಂದ ಸವದಿ, ರಾಜೇಂದ್ರ ಸಣ್ಣಕ್ಕಿ, ಕಿರಣಕುಮಾರ ಪಾಟೀಲ, ಸದಾಶಿವ ಬುಟಾಳಿ, ಸತ್ಯಪ್ಪ ಬಾಗೆಣ್ಣವರ, ಸುರೇಶ ಮಾಯನ್ನವರ, ವಸಂತ ದಳವಾಯಿ, ಬಿಇಒ ಎಂ.ಆರ್. ಮುಂಜೆ, ರವೀಂದ್ರ ಪೂಜಾರಿ, ಗಜಾನನ ಮಂಗಸೂಳಿ,ನಿವೃತ್ತ ಡಿವೈಎಸ್‌ಪಿ ಅಶೋಕ ಸದಲಗೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.