ADVERTISEMENT

ಕೆಎಸ್‌ಆರ್‌ಪಿ: ನಿರ್ಗಮನ ಪಥಸಂಚಲನ ಡಿ,1ರಂದು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 10:25 IST
Last Updated 30 ನವೆಂಬರ್ 2020, 10:25 IST
ಹಂಜಾ ಹುಸೇನ್
ಹಂಜಾ ಹುಸೇನ್   

ಬೆಳಗಾವಿ: ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) 6ನೇ ತಂಡದ ಪುರುಷ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಡಿ. 1ರಂದು ಬೆಳಿಗ್ಗೆ 9ಕ್ಕೆ ಎಪಿಎಂಸಿ ರಸ್ತೆಯಲ್ಲಿರುವ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ನಡೆಯಲಿದೆ’ ಎಂದು ಕೆಎಸ್‌ಆರ್‌ಪಿ 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ತಿಳಿಸಿದರು.

‘ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮುಖ್ಯಅತಿಥಿಯಾಗಿ ಭಾಗವಹಿಸುವರು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್‌ ‍ಪಾಲ್ಗೊಳ್ಳುವರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೆಎಸ್ಆರ್‌ಪಿ ಉತ್ಸವ ಪ್ರಯುಕ್ತ 2ನೇ ಪಡೆ ಮಚ್ಚೆ ಘಟಕದಿಂದ ಡಿ.1ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್‌ ‍ಪಾಲ್ಗೊಳ್ಳುವರು. ಮುಂಬಡ್ತಿ ಪಡೆದ 50 ಮಂದಿ ಆರ್‌ಎಚ್‌ಸಿಗಳಿಗೆ ವೃತ್ತಿ ಕೌಶಲ ಅಭಿವೃದ್ಧಿಗಾಗಿ ಪುನರ್ಮನನ ತರಬೇತಿ ಹಮ್ಮಿಕೊಳ್ಳಲಾಗಿದೆ’.

ADVERTISEMENT

‘ಡಿ. 2ರಂದು ಬೆಳಿಗ್ಗೆ 7ಕ್ಕೆ ಎಡಿಜಿಪಿ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದಿಂದ ಮಚ್ಚೆವರೆಗೆ ಸೈಕಲ್ ಜಾಥಾ ಆಯೋಜಿಸಲಾಗಿದೆ. ಪಡೆಯ ನಗರ ಹಾಗೂ ಜಿಲ್ಲಾ ಪೊಲೀಸ್ ತರಬೇತಿ ಶಾಲೆಗಳವರು, ಸಾರ್ವಜನಿಕರು ಸೇರಿ 400 ಮಂದಿ ಪಾಲ್ಗೊಳ್ಳಲಿದ್ದಾರೆ. ಸದೃಢ ಹಾಗೂ ಆರೋಗ್ಯಕರ ಬೆಳಗಾವಿಗಾಗಿ’ ಶೀರ್ಷಿಕೆಯಲ್ಲಿ ಜಾಥಾ ನಡೆಸಲಾಗುತ್ತಿದೆ. ಇದಕ್ಕೆ ಎಜುಕೇಷನ್ ಇಂಡಿಯಾ ಸಂಸ್ಥೆ ಸಹಯೋಗ ನೀಡಿದೆ’ ಎಂದು ತಿಳಿಸಿದರು.

‘ಕೋವಿಡ್–19 ಭೀತಿ ನಡುವೆಯೂ ಪಡೆಯಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇವೆ. 70 ಮಂದಿ ಅಧಿಕಾರಿ/ ಸಿಬ್ಬಂದಿಗೆ ಕೋವಿಡ್–19 ದೃಢಪಟ್ಟಿತ್ತು. ಅದರಲ್ಲಿ ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತರಾದರು. ಅವರ ಪತ್ನಿಗೆ ಸರ್ಕಾರದಿಂದ ₹ 30 ಲಕ್ಷ ಪರಿಹಾರ ಮಂಜೂರಾಗಿದೆ. ಕೋವಿಡ್‌ನಿಂದ ಗುಣಮುಖರಾದ ನಂತರ ಅಸ್ಲಂ ಫಣಿಬಂಧ ಆರ್‌ಎಚ್‌ಸಿ ಎ.ಎಸ್. ಮುತಾಲಿಕ್ ಅವರ ತಂದೆ ಸುರೇಶ ಮುತಾಲಿಕ್ ಅವರಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ. ಬೆಳಗಾವಿ ಘಟಕವೊಂದರಲ್ಲೇ 45 ಮಂದಿ ಪ್ಲಾಸ್ಮಾ ದಾನಕ್ಕೆ ಸಿದ್ಧವಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.