ನಿಪ್ಪಾಣಿ: ಹಾಲಸಿದ್ಧನಾಥ ದೇವರ ಜಾತ್ರೆ ಅಂಗವಾಗಿ ತಾಲ್ಲೂಕಿನ ಕುರ್ಲಿ ಗ್ರಾಮದ ಶಿಂತ್ರೆ ಕುಸ್ತಿ ಅಖಾಡದಲ್ಲಿ ನಡೆದ ಪ್ರಥಮ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ಘೋಡಗೆರಿ ತಾಲಮಿಯ ಮಲ್ಲ ಪ್ರಕಾಶ ಪಾಟೀಲ ಅರ್ಜುನವಾಡಾದ ಮಲ್ಲ ಅಕ್ಷಯ ಚೌಗುಲೆ ಅವರನ್ನು ಸೋಲಿಸಿ ಬೆಳ್ಳಿಯ ಗದೆ ತಮ್ಮದಾಗಿಸಿಕೊಂಡರು.
ಎರಡನೇಯ ಕ್ರಮಾಂಕದ ಕುಸ್ತಿಯಲ್ಲಿ ಢೋಣೆವಾಡಿ ತಾಲಮಿಯ ಪೃಥ್ವಿರಾಜ ಖರಾತ ಮತ್ತು ಬೆಳಗಾವಿಯ ದರ್ಗಾ ತಾಲಮಿಯ ಪವನ ಪಾಟೀಲ ಈ ಇಬ್ಬರ ಜಟ್ಟಿಗಳ ಮಧ್ಯೆ ಕುತೂಹಲಕಾರಿ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಜಟ್ಟಿ ಪೃಥ್ವಿರಾಜ ಖರಾತ ಜಯಶಾಲಿಯಾದರು. ಕಾಳಗದಂತೆ ಕಾಣುತ್ತಿದ್ದ ನಂದಗಾವನ ಪೈಲ್ವಾನ್ ವಿವೇಕ ಚೌಗುಲೆ ಪೈಲ್ವಾನ್ ಮತ್ತು ಬಾಚಣಿಯ ಪೈಲ್ವಾನ್ ಪಾರ್ಥ ಕಳಂತ್ರೆ ಇವರ ಮಧ್ಯದ ಮೂರನೇಯ ಕ್ರಮಾಂಕದ ಕುಸ್ತಿ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.
ನಾಲ್ಕನೇಯ ಕ್ರಮಾಂಕದ ಕುಸ್ತಿಯಲ್ಲಿ ಢೋಣೆವಾಡಿಯ ಪೈಲ್ವಾನ್ ಅಮಿತ ಕಾಂಬಳೆ ಕುಂಭಿ ಕಾಸಾರಿಯ ಪೈಲ್ವಾನ್ ಪ್ರತಿಕ ಸಾಳುಂಖೆಗೆ, ಐದನೇಯ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ರಾಶಿವಡೆಯ ಪೈಲ್ವಾನ್ ವಿಕ್ರಮ ಗಾವಡೆ ತಿಟವೆಯ ಪೈಲ್ವಾನ್ ದುರ್ಗೇಶ ನಾರ್ವೇಕರಗೆ ಸೋಲಿಸಿದರು. ಕುರ್ಲಿ ಗ್ರಾಮದ ಪೈಲ್ವಾನ್ ಧನರಾಜ ಪಾಟೀಲ-ಮಹಿಪತಿ ಕೊಲ್ಹಾಪುರದ ಗಂಗಾವೇಸ್ ತಾಲಮಿಯ ಪೈಲ್ವಾನ್ ಪ್ರಥಮೇಶ ಶಿಂಧೆಯ ಮೇಲೆ ಜಯಭೇರಿ ಬಾರಿಸಿದರು. ಈ ಸ್ಪರ್ಧೆಯಲ್ಲಿ ಸುಮಾರು 30ಕ್ಕೂ ಅಧಿಕ ಕುಸ್ತಿ ಪಂದ್ಯಗಳು ನಡೆದವು.
ಆರಂಭದಲ್ಲಿ ರೋಹನಹ ಪಾಟೀಲ-ಶಿಂತ್ರೆ, ಗ್ರಾಮ ಪಂಚಾಯಿತಿ ಸದಸ್ಯ ನ್ಯಾಯವಾದಿ ಅಮರ ಶಿಂತ್ರೆ, ಆದಿತ್ಯ ಶಿಂತ್ರೆ ಶಿಂತ್ರೆ ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸಿದರು. ಬಾಳು ಮಾಳಿ, ಮಧು ಪಾಟೀಲ, ಲಹು ಪಾಟೀಲ, ಬಾಳು ಪಾನಾರಿ, ನೇತಾಜಿ ಘರಾಳ, ವಾಸು ದಿವಟೆ, ವಿಠ್ಠಲ ಪಾಟೀಲ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ವಿಎಸ್‍ಎಂ ನಿರ್ದೇಶಕ ನ್ಯಾಯವಾದಿ ಸಂಜಯ ಶಿಂತ್ರೆ, ಕೆ.ಡಿ. ಪಾಟೀಲ, ವಿನಯ ಶಿಂತ್ರೆ, ಅಜಯ ಪಾಟೀಲ-ಶಿಂತ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.