ADVERTISEMENT

ಮೂಲ ಸೌಲಭ್ಯ ವಂಚಿತ ಶಿವಾಜಿನಗರ

ನಿರ್ವಹಣೆಯಲ್ಲೂ ನಿರ್ಲಕ್ಷ್ಯ: ಜನರಿಗೆ ತೊಂದರೆ

ಪ್ರಸನ್ನ ಕುಲಕರ್ಣಿ
Published 6 ಏಪ್ರಿಲ್ 2021, 3:59 IST
Last Updated 6 ಏಪ್ರಿಲ್ 2021, 3:59 IST
ಖಾನಾಫುರದ ಶಿವಾಜಿನಗರದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿ ಪಕ್ಕದ ದುಃಸ್ಥಿತಿ ಹೀಗಿದೆ
ಖಾನಾಫುರದ ಶಿವಾಜಿನಗರದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿ ಪಕ್ಕದ ದುಃಸ್ಥಿತಿ ಹೀಗಿದೆ   

ಖಾನಾಪುರ: ಹೊರವಲಯದ ಶಿವಾಜಿನಗರ ಬಡಾವಣೆಯು ಸಮರ್ಪಕ ಸಂಪರ್ಕ ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ರಾಮಗುರವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಬಡಾವಣೆ ಸ್ವಚ್ಛತೆಯ ನಿರ್ವಹಣೆಯಲ್ಲೂ ವಿಫಲವಾಗಿದೆ.

ಶಿವಾಜಿ ನಗರದಲ್ಲಿ 300 ಮನೆಗಳಿವೆ. ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಹರಡಿಕೊಂಡಿರುವ ಈ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ಶಿಕ್ಷಕರು, ಮಾಜಿ ಸೈನಿಕರು ಮತ್ತು ಅರಣ್ಯ ಇಲಾಖೆಯವರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಒಟ್ಟು 6 ಮುಖ್ಯ ರಸ್ತೆಗಳು, 20 ಅಡ್ಡ ರಸ್ತೆಗಳ ಪೈಕಿ ಶೇ.30ರಷ್ಟು ಸಿ.ಸಿ ರಸ್ತೆಗಳಿದ್ದು, ಉಳಿದವು ಕಚ್ಚಾ ರಸ್ತೆಯಾಗಿವೆ. ದಶಕಗಳ ಹಿಂದೆ ನಿರ್ಮಾಣವಾದ ಈ ರಸ್ತೆಗಳಲ್ಲಿ ಕಲ್ಲು-ಖಡಿಗಳು ಕಿತ್ತುಹೋಗಿವೆ.

ADVERTISEMENT

ನಿರ್ವಹಣೆಯ ಕೊರತೆಯಿಂದಾಗಿ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿ ಧೂಳು ಸಹ ಸೇರಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಹುತೇಕ ರಸ್ತೆಗಳ ಅಕ್ಕಪಕ್ಕ ಚರಂಡಿಗಳಿಲ್ಲ. ಅಲ್ಲಲ್ಲಿ ಇರುವ ಚರಂಡಿಗಳಲ್ಲಿ ಹೂಳು ಮತ್ತು ಕಸ ತುಂಬಿಕೊಂಡಿದೆ. ಹೀಗಾಗಿ ಬಡಾವಣೆಯ ಅಲ್ಲಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳನ್ನು ಹರಡುವ ಸನ್ನಿವೇಶ ನಿರ್ಮಾಣವಾಗಿದೆ.

ಸಮರ್ಪಕ ನೀರು ಸರಬರಾಜಿನ ಸಮಸ್ಯೆಯೂ ಇದೆ. ಕಸ ಸಂಗ್ರಹ ಮತ್ತು ವಿಲೇವಾರಿಯ ವಿಷಯದಲ್ಲೂ ಶಿವಾಜಿನಗರ ಬಡಾವಣೆ ವಿಫಲವಾಗಿದೆ. ಬಡಾವಣೆಯ ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ತಂದು ರಸ್ತೆ ಪಕ್ಕದಲ್ಲಿ ಮತ್ತು ಬಡಾವಣೆಯ ಪಶ್ಚಿಮ ದಿಕ್ಕಿನಲ್ಲಿ ಹಾದು ಹೋಗಿರುವ ರೈಲ್ವೆ ಹಳಿಗಳ ಪಕ್ಕ ಎಸೆಯುತ್ತಾರೆ. ತಾಲ್ಲೂಕು ಕೇಂದ್ರ ಸ್ಥಾನದಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದ್ದರೂ ಅಭಿವೃದ್ಧಿ ವಂಚಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಪರಿಣಾಮ, ನಿವಾಸಿಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಿಸಿದರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಅಸಮಾಧಾನ ಅಲ್ಲಿನ ನಿವಾಸಿಗಳದ್ದು.

‘ಬಡಾವಣೆಯಲ್ಲಿ ಸಮರ್ಪಕ ರಸ್ತೆ, ಬೀದಿದೀಪ, ಚರಂಡಿಗಳಿಲ್ಲ. ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ವಿಷಯವಾಗಿ ಮೇಲಿಂದ ಮೇಲೆ ಗ್ರಾಮ ಪಂಚಾಯ್ತಿಗೆ ನಿಯೋಗ ಕೊಂಡೊಯ್ದು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಉದಯ ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.