ಗೋಕಾಕ: ಪ್ರವಾಹ ಸಂತ್ರಸ್ತರಿಗಾಗಿ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರಲಾಗಿದೆ. 550ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ. ಆದರೆ, ಇಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲದೇ ಜನ ಪರದಾಡುವಂತಾಗಿದೆ.
ತಾಲ್ಲೂಕು ಆಡಳಿತ ತೆರೆದ ಕಾಳಜಿ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಇದರಿಂದ ಎಂಪಿಎಂಸಿಯಲ್ಲಿರುವ ವರ್ತಕರ ಅಂಗಡಿಗಳ ಮುಂದೆ ತಮ್ಮ ದಿನಬಳಕೆ ಸಾಮಾನುಗಳೊಂದಿಗೆ ಬಿಡಾರ ಹೂಡಿದ್ದಾರೆ. ತಹಶೀಲ್ದಾರ್ ಡಾ.ಮೋಹನ ಭಸ್ಮೆ ಇತ್ತಕಡೆ ಗಮನ ಹರಿಸಿ ಅವರಿಗೆ ವಾಸಿಸಲು ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಂಡಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಕಾಳಜಿ ಕೇಂದ್ರದ ಕಟ್ಟಡ ಕೂಡ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಜನ ಇಲ್ಲಿ ವಾಸವಾಗಲು ಹಿಂದೇಟು ಹಾಕಿದ್ದಾರೆ. ಇನ್ನೊಂದೆಡೆ, ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಅವರು ದನ–ಕರುಗಳಿಗೆ ಗಂಟಲು ಬೇನೆ ಬರದಂತೆ ಲಸಿಕೆಯನ್ನು ನೀಡಿ ದನಕರುಗಳ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಉಕ್ಕೇರಿದ ನದಿಗಳು: ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ನೀರು ಅಪಾಯ ಮಟ್ಟವನ್ಞು ಮೀರಿ ಹರಿಯುತ್ತಿವೆ. ನಗರದ ಹಳೆ ದನಗಳ ಪೇಟೆ, ಡೋರ ಓಣಿ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ ಸೇರಿದಂತೆ ಅನೇಕ ಕಡೆಗಳಲ್ಲಿ ನದಿ ನೀರು ನುಗ್ಗಿದೆ. ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ, ಚಿಕ್ಕೋಳಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಸೇತುವೆ ನೋಡಲು ಜನ ತಂಡೋಪ ತಂಡವಾಗಿ ಬರುತ್ತಿರುವ ಪರಿಣಾಮ ಅವರನ್ನು ನದಿ ದಡಕ್ಕೆ ತೆರಳದಂತೆ ಚುದುರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಪಿಎಸ್ಐ ಕೆ.ವಾಲಿಕರ ಅವರ ನೇತೃತ್ವದಲ್ಲಿ ನಗರದ ನದಿ ತೀರದ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪಿಎಸ್ಐ ಕೆ.ವಾಲಿಕರ, ನಗರಸಭೆಯ ಪೌರಾಯುಕ್ತ ರಮೇಶ ಜಾಧವ್, ಎಂ.ಎಚ್.ಗಜಾಕೋಶ, ಜಯೇಶ ತಾಂಬೂಳೆ, ಎಇಇ ಪಾಟೀಲ, ಹೆಸ್ಕಾಂ ಇಲಾಖೆಯ ಎಸ್.ಪಿ.ವರಾಳೆ , ಎಸ್.ಒ ಶ್ರೀಧರ ಯಲಿಗಾರ, ಆರೋಗ್ಯ ಇಲಾಖೆಯ ಡಾ.ಎಂ.ಎಸ್.ಕೊಪ್ಪದ ಮತ್ತು ತಂಡ, ಶಿಕ್ಷಣ ಇಲಾಖೆಯ ಸಿ.ಆರ್.ಪಿ, ಬಿ.ಆರ್.ಸಿ ಮತ್ತು ಶಿಕ್ಷಕರ ತಂಡದವರು ಪ್ರವಾಹ ಪರಿಸ್ಥಿತಿ ನಿಯಂತ್ರಣ ಕೆಲಸದಲ್ಲಿ ತೊಡಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.