ಚಿಕ್ಕೋಡಿ: ₹8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಆವರಣ ಗೋಡೆಯೇ ಇಲ್ಲ. ಬೋಧನೆಗೆ ಕಾಯಂ ಉಪನ್ಯಾಸಕರಿಲ್ಲ. ಕೊಳವೆಬಾವಿ ಇದ್ದರೂ, ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಕಾಲೇಜಿಗೆ ಬರಲು ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲ.
ಹೀಗೆ ಸಾಲು ಸಾಲು ಸಮಸ್ಯೆಗಳಿಂದ ತಾಲ್ಲೂಕಿನ ಸದಲಗಾ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಬಳಲುತ್ತಿದೆ. ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ಇಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಿ, ಮೂರು ವರ್ಷ ಕಳೆದಿದೆ. ಆದರೆ, ಕನಿಷ್ಠ ಮೂಲಸೌಕರ್ಯವೂ ಇಲ್ಲದಿರುವುದು ವಿದ್ಯಾರ್ಥಿಗಳ ನಿರಾಸೆಗೆ ಕಾರಣವಾಗಿದೆ.
ಇಲ್ಲಿ ಕಂಪ್ಯೂಟರ್ ಸೈನ್ಸ್, ಸಿವಿಲ್ ವಿಭಾಗದ ಡಿಪ್ಲೊಮಾ ಕೋರ್ಸ್‌ಗಳಿದ್ದು, 193 ವಿದ್ಯಾರ್ಥಿಗಳು ಇದ್ದಾರೆ. ಕಲಿಕೆಗಾಗಿ ಚಿಕ್ಕೋಡಿ, ಸದಲಗಾ, ನಿಪ್ಪಾಣಿ, ಬೇಡಕಿಹಾಳ, ಯಕ್ಸಂಬಾ, ಬೋರಗಾಂವ ಮತ್ತಿತರ ಕಡೆಯಿಂದ ಅವರು ಆಗಮಿಸುತ್ತಿದ್ದಾರೆ.
ಬೆಳಿಗ್ಗೆ 9ಕ್ಕೆ ತರಗತಿ ಆರಂಭವಾಗುತ್ತವೆ. ಈ ಕಾಲೇಜು ಮಾರ್ಗವಾಗಿ ಕಾರ್ಯಾಚರಣೆ ನಡೆಸುವ ಬಸ್ 9.30ಕ್ಕೆ ಚಿಕ್ಕೋಡಿಯಿಂದ ಹೊರಡುತ್ತದೆ. ಅದು 10.30ಕ್ಕೆ ಕಾಲೇಜು ತಲುಪುತ್ತದೆ. ಹಾಗಾಗಿ ಸಕಾಲಕ್ಕೆ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಆಗುತ್ತಿಲ್ಲ.
ತರಗತಿ ಅವಧಿಗೆ ಪೂರಕವಾಗಿ ಬಸ್ ವ್ಯವಸ್ಥೆ ಇಲ್ಲದ್ದರಿಂದ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಕಾಲೇಜು ತಲುಪಲು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇದೇ ಮಾರ್ಗದಲ್ಲಿ ಸಂಚರಿಸುವವರ ಬೈಕ್‌ಗಳ ನೆರವಿನಿಂದ ನೇಜ್ ಕ್ರಾಸ್, ಸದಲಗಾ ಕ್ರಾಸ್, ನಣದಿ ಕ್ರಾಸ್, ವಡಗೋಲ ಕ್ರಾಸ್‌ವರೆಗೆ ಬಂದು, ಅಲ್ಲಿಂದ ಕಾಲ್ನಡಿಗೆ ಮೂಲಕ ಬೆಟ್ಟ–ಗುಡ್ಡ, ಹೊಲಗಳನ್ನು ದಾಟಿ ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಇದೆ.
‘ಈ ಕಾಲೇಜಿನಲ್ಲಿ ಒಬ್ಬರು ಪ್ರಾಚಾರ್ಯ, ನಿಯೋಜನೆ ಆಧಾರದಲ್ಲಿ ಇಬ್ಬರು ಉಪನ್ಯಾಸಕರು, ಐವರು ಅತಿಥಿ ಉಪನ್ಯಾಸಕರಿದ್ದಾರೆ. ಆದರೆ, ಕಾಯಂ ಉಪನ್ಯಾಸಕರು ಇಲ್ಲದ್ದರಿಂದ ಕಲಿಕೆಗೆ ತೊಡಕಾಗುತ್ತಿದೆ’ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿ 14 ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಅಗತ್ಯವಿದೆ. ಆದರೆ, ಪ್ರಾಚಾರ್ಯ ಹೊರತುಪಡಿಸಿದರೆ, ಬೇರ್‍ಯಾವ ಹುದ್ದೆ ಮಂಜೂರಾಗಿಲ್ಲ.
‘ಇಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗವಿದೆ. ಆದರೆ, ಎಂಟೇ ಕಂಪ್ಯೂಟರ್‌ಗಳಿವೆ. ಅವು ಏತಕ್ಕೂ ಸಾಲುತ್ತಿಲ್ಲ. ಎರಡೂ ವಿಭಾಗಕ್ಕೆ ಸೇರಿ 90 ಕಂಪ್ಯೂಟರ್‌ಗಳ ಅಗತ್ಯವಿದೆ. ಅಲ್ಲದೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಈಗ ಇರುವ ಕಂಪ್ಯೂಟರ್‌ಗಳೂ ಕಾರ್ಯನಿರ್ವಹಿಸುತ್ತಿಲ್ಲ. ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿ’ ಎಂಬುದು ವಿದ್ಯಾರ್ಥಿಗಳ ಆಗ್ರಹ.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇತ್ತೀಚೆಗೆ 16 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಮಳೆಗಾಲದಲ್ಲೂ ಶುದ್ಧ ಕುಡಿಯುವ ನೀರು ಮರೀಚಿಕೆ.
ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೇಡಿಕೆಯಂತೆ ಕಂಪ್ಯೂಟರ್ ಇಲ್ಲ. ಇದರಿಂದ ಕಲಿಕೆಗೆ ಅನಾನುಕೂಲವಾಗುತ್ತಿದೆ–ಶ್ರೇಯಾ ರಣಕಾಂಬಳೆ ವಿದ್ಯಾರ್ಥಿನಿ
ನಾನು ಬೇಡಕಿಹಾಳದಿಂದ ಇಲ್ಲಿ ಓದಲು ಬರುತ್ತೇನೆ. ಬಸ್ ವ್ಯವಸ್ಥೆ ಇಲ್ಲದ್ದರಿಂದ ನಡೆದುಕೊಂಡೇ ಕಾಲೇಜಿಗೆ ಬರುವುದು ಅನಿವಾರ್ಯ–ಅಕ್ಷತಾ ಶೆಟ್ಟಿ ವಿದ್ಯಾರ್ಥಿನಿ
2022ರಲ್ಲಿ ಆರಂಭವಾದ ಪಾಲಿಟೆಕ್ನಿಕ್‌ಗೆ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಸಮರ್ಪಕ ಬಸ್ ಸೌಕರ್ಯ ಬೇಕಿದೆ. ಈ ಕುರಿತು ಸಂಬಂಧಿತರ ಗಮನಕ್ಕೆ ತರಲಾಗಿದೆ-ಸಂತೋಷ ಪೀರಪ್ಪಗೋಳ ಪ್ರಾಚಾರ್ಯ
ಸದಲಗಾ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಈ ಪಾಲಿಟೆಕ್ನಿಕ್ ಕಾಲೇಜು ಸಮಸ್ಯೆಗಳ ಆಗರವಾಗಿದೆ. ಇಲ್ಲಗಳ ತಾಣವಾಗಿ ಮಾರ್ಪಟ್ಟಿದೆ–ಫಯಾಜ್ ಪಟೇಲ್ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.