ADVERTISEMENT

ಅಕ್ರಮ ಎಸಗುವವರು ಕಾಂಗ್ರೆಸ್‌ನವರೆ: ಲಖನ್ ಜಾರಕಿಹೊಳಿ ವಾಗ್ದಾಳಿ

ನಮ್ಮದು ಯಾವಾಗಲೂ ಎ ಟೀಂ: ಸತೀಶಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 11:41 IST
Last Updated 1 ಡಿಸೆಂಬರ್ 2021, 11:41 IST
ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ   

ಬೆಳಗಾವಿ: ‘ಅಕ್ರಮ ಎಸಗುವವರೇ ಅವರು. ಕೈಗೆ ಮಸಿ ಹಚ್ಚಿಕೊಂಡು ಬೇರೆಯವರ ಮುಖಕ್ಕೆ ಬಳಿಯುತ್ತಾರೆ’ ಎಂದು ವಿಧಾನಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಮಾರಿಹಾಳದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ನಾನು ಹಿಂದಿನಿಂದಲೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜಾತಿಯವರೂ ನಮ್ಮನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸತೀಶ ಜಾರಕಿಹೊಳಿ ಒಬ್ಬ ಚುನಾಯಿತ ಜನಪ್ರತಿನಿಧಿ. ಮಾರ್ಗಸೂಚಿಯಲ್ಲಿ ಅವಕಾಶವಿದ್ದರೆ ಮತಗಟ್ಟೆ ಏಜೆಂಟ್ ಆಗುವುದಾದರೆ ಆಗಲಿ. ಅದಕ್ಕೆ ನನಗೇನೂ ಅಭ್ಯಂತರವಿಲ್ಲ. ನಾವ್ಯಾರೂ ಮತ ಚಲಾಯಿಸುವುದಿಲ್ಲ. ಮತ ಹಾಕುವವರು ಸ್ಥಳೀಯ ಸಂಸ್ಥೆಗಳ ಸದಸ್ಯರು ತಾನೆ? ನಾನು ಪ್ರತಿ ಸ್ಪರ್ಧಿಗಳ ಬಗ್ಗೆ ಆರೋಪ ಮಾಡಲು ಬಯಸುವುದಿಲ್ಲ’ ’ ಎಂದು ಕೇಳಿದರು.

ADVERTISEMENT

ನಂತರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳಷ್ಟೆ ಕಣದಲ್ಲಿದ್ದರೆ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಮಾತನಾಡಿಸುವವರು ಯಾರೂ ಇರುತ್ತಿರಲಿಲ್ಲ. ನನ್ನನ್ನು ಗೆಲ್ಲಿಸಿದರೆ, ನಿಮಗಿರುವ ಮಹತ್ವವನ್ನು ಇನ್ನೂ ಆರು ವರ್ಷಗಳ ಕಾಲ ಹೀಗೆಯೇ ಇರುವಂತೆ ನೋಡಿಕೊಳ್ಳುತ್ತೇನೆ. ನಿಮ್ಮೊಂದಿಗೆ ಸದಾ ಇರುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ನಾವೆಲ್ಲರೂ 20 ವರ್ಷಗಳಿಂದ ಕುಟುಂಬದ ರೀತಿ ಇದ್ದೇವೆ. ಪಂಚಾಯಿತಿಯದ್ದಿರಲಿ, ಗ್ರಾಮದ ಕೆಲಸವಿರಲಿ ಮಾಡಿಸಿಕೊಡುತ್ತೇನೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು. ಪ್ರತಿಸ್ಪರ್ಧಿಗಳು ಆಸೆ–ಆಮಿಷ ಒಡ್ಡುತ್ತಾರೆ. ಅದಕ್ಕೆ ಮಣಿಯಬೇಡಿ. ಸ್ವಾಭಿಮಾನ ಮುಖ್ಯ’ ಎಂದರು.

‘ಲಖನ್‌ ಬಿಜೆಪಿಯ ಬಿ ಟೀಂ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಯಾವಾಗಲೂ ಎ ಟೀಮ್ ಮತ್ತ ಎ 1. ಅವರೇ ಬಿ, ಸಿ ಟೀಂ’ ಎಂದು ತಿರುಗೇಟು ನೀಡಿದರು.

‘ನಾವು ಯಾವಾಗಲೂ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಝಡ್ ಪ್ಲಸ್ ಸೆಕ್ಯುರಿಟಿ, ಆಡಂಬರ, ವಿಜೃಂಭಣೆ ಮಾಡುವವರಲ್ಲ. ಸರಳವಾಗಿಯೇ ಇರುತ್ತೇನೆ. ನನ್ನ ಬಳಿಯೂ ವಾಹನಗಳಿವೆ. ಹಿಂದೆ ನಾಲ್ಕು– ಮುಂದೆ ನಾಲ್ಕು ವಾಹನವನ್ನು ನಾವೂ ತರಬಹುದು. ಆದರೆ, ಅದು ಬೇಡ. ಒಬ್ಬನೇ ಬರುತ್ತೇನೆ, ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.