ADVERTISEMENT

ಲಖನ್‌ ಬಿಜೆಪಿಯ ಬಿ ಟೀಂ: ಸತೀಶ ಜಾರಕಿಹೊಳಿ ಲೇವಡಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 15:58 IST
Last Updated 30 ನವೆಂಬರ್ 2021, 15:58 IST
   

ಬೆಳಗಾವಿ: ‘ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಖನ್ ಜಾರಕಿಹೊಳಿ ಬಿಜೆಪಿಯ ಬಿ ಟೀಂ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಒಂದೇ ಮತ ಹಾಕುವಂತೆ ಹೇಳಿಕೆ ನೀಡುತ್ತಿರುವ ಲಖನ್‌ಗೆ ಕ್ಷೇತ್ರದ ಪರಿಚಯವೇ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಸಭೆಗಳಲ್ಲಿ ಆ ಪಕ್ಷದ ಅಭ್ಯರ್ಥಿ ಪರವಾಗಿಯೇ ಮತ ಯಾಚಿಸುತ್ತಿಲ್ಲ. ಜಾತ್ರೆಗಳಂತಹ ವೇದಿಕೆಗಳಲ್ಲಿ ಮಾತನಾಡುತ್ತಿದ್ದಾರಷ್ಟೆ’ ಎಂದು ಟೀಕಿಸಿದರು.

ADVERTISEMENT

‘ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಗುರಿ ಇಟ್ಟುಕೊಂಡಿದ್ದೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇವೆ’ ಎಂದರು.

‘ಮುಖಂಡ ವಿವೇಕರಾವ್ ಪಾಟೀಲ ಅವರು ರಮೇಶ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ಬಿಜೆಪಿ ಬೆಂಬಲಿಸುವುದರಿಂದ ಮತ ವಿಭಜನೆ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯವನ್ನೇ ನಡೆಸಿಲ್ಲ.ಬಿಜೆಪಿ ಬಂಡಾಯ ಅಭ್ಯರ್ಥಿ ಲಖನ್ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಪ್ರಯತ್ನಿಸಲೂ ಇಲ್ಲ’ ಎಂದು ಟೀಕಿಸಿದರು.

‘ಬಿಜೆಪಿಯ 13 ಶಾಸಕರ ಪೈಕಿ ಇಬ್ಬರು ಬಂಡಾಯ ಅಭ್ಯರ್ಥಿ ಪರವಾಗಿದ್ದಾರೆ. ಪ್ರಚಾರದಲ್ಲಿ ಕಾಂಗ್ರೆಸ್ ನಂ.1 ಸ್ಥಾನದಲ್ಲಿದೆ. ಬಿಜೆಪಿ ಇನ್ನೂ ಪ್ರಚಾರ ಕಾರ್ಯವನ್ನೇ ಆರಂಭಿಸಿಲ್ಲ. ಆ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರೊಬ್ಬರೆ ಜಿಲ್ಲೆಯಾದ್ಯಂತ ಸಂಚರಿಸಿ ಮತ ಯಾಚನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ಪ್ರತಿ ನಾಯಕರು–ಕಾರ್ಯಕರ್ತರ ಕರ್ತವ್ಯವಾಗಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿಯಲ್ಲಿ ಬಹಳ ಗೊಂದಲವಿದೆ’ ಎಂದು ಪ್ರತಿಕ್ರಿಯಿಸಿದರು.

‘ಸುಲಭ ಸಾಲ, ಸುಲಭ ಕಂತು ಎಂದೆಲ್ಲಾ ತಿಳಿಸಿ ಸಾಲ ಕೊಡುವವರ ರೀತಿ ಪಕ್ಷೇತರ ಅಭ್ಯರ್ಥಿ ಪ್ರಚಾರ ಮಾಡುತ್ತಿದ್ದಾರೆ. ಸಾಲದ ಕಂತು ಪಾವತಿಸದಿದ್ದರೆ ವಾಹನ ಜಪ್ತಿ ಮಾಡುವಂತೆ, ಚುನಾವಣೆ ಬಳಿಕ ಹೋಗಿ ಬಿಡುತ್ತಾರೆ. ಅಂಥವರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.