ADVERTISEMENT

ಹತಾಶೆಯಿಂದ ಆರೋಪ: ಸಂಜಯಗೆ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 16:23 IST
Last Updated 30 ಸೆಪ್ಟೆಂಬರ್ 2021, 16:23 IST
ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ
ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ    

ಬೆಳಗಾವಿ: ‘ಲಕ್ಷ್ಮಿ ಹೆಬ್ಬಾಳಕರ ರಾತ್ರಿ ರಾಜಕೀಯದಿಂದ ಶಾಸಕಿಯಾದರು’ ಎಂಬ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿಕೆಗೆ ಕಾಂಗ್ರೆಸ್‌ ಮುಖಂಡರೂ ಆಗಿರುವ ಲಕ್ಷ್ಮಿ ಸಹೋದರ ಚನ್ನರಾಜ ಹಟ್ಟಿಹೊಳಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಗುರುವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಬಿಜೆಪಿಯವರು ಕತ್ತಲ ರಾಜಕಾರಣ ಮಾಡುತ್ತಿದ್ದಾರೆ. ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ ಬರಹವಿದ್ದ ಬ್ಯಾನರ್‌ಗಳನ್ನು ಕತ್ತಲಲ್ಲಿ ಈಚೆಗೆ ಹಾಕಿದ್ದರು. ಈ ಬಗ್ಗೆ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ’ ಎಂದಿದ್ದಾರೆ.

‘ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಕ್ರಿಯಾಶೀಲ ಶಾಸಕರ ಪಟ್ಟಿಯಲ್ಲಿ ಅವರಿದ್ದಾರೆ. 25 ವರ್ಷಗಳಲ್ಲಿ ಆಗದಿರುವ ಕೆಲಸಗಳನ್ನು ಮೂರು ವರ್ಷಗಳಲ್ಲಿ ಮಾಡಿದ್ದಾರೆ. ₹ 1,200 ಕೋಟಿ ಅನುದಾನ ತಂದಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಹತಾಶ ಮನೋಭಾವದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಬಿಜೆಪಿಯವರು ನಿಲ್ಲಿಸಬೇಕು. ಏನೇ ಇದ್ದರೂ ನೇರಾನೇರ ರಾಜಕಾರಣಕ್ಕೆ ಬರಬೇಕು’ ಎಂದು ಸವಾಲು ಹಾಕಿದ್ದಾರೆ.

ADVERTISEMENT

‘ಗ್ರಾಮೀಣ ಕ್ಷೇತ್ರವು ಮಲೆನಾಡು ಒಳಗೊಂಡಿದೆ. ಇಲ್ಲಿ ಪ್ರತಿ ವರ್ಷ ಪ್ರವಾಹ ಅಥವಾ ಅತಿವೃಷ್ಟಿ ಸಮಸ್ಯೆ ಬಂದೇ ಬರುತ್ತದೆ. ಮಾರ್ಕಂಡೇಯ ನದಿ 50 ಗ್ರಾಮಗಳ ಸಮೀಪವೇ ಹರಿದು ಹೋಗುತ್ತದೆ. ಪ್ರವಾಹದಿಂದ ರಸ್ತೆಗಳು ಹಾಳಾಗುತ್ತವೆ. ಅವು ಡಾಂಬರು ರಸ್ತೆಗಳು. ಮಳೆಗಾಲದಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗುವುದಿಲ್ಲ. ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿ, ಶಾಸಕರು ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದಿದ್ದಾರೆ.

‘ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಅಭಿವೃದ್ಧಿಯ ರಾಣಿ (ಡೆವಲಪ್‌ಮೆಂಟ್ ಕ್ವೀನ್). ಅಭಿವೃದ್ಧಿ ಕಾರ್ಯದಿಂದಲೇ ಜನಪ್ರಿಯರಾಗಿದ್ದಾರೆ. ಅದನ್ನು ಸಹಿಸಿಕೊಳ್ಳದೆ ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.