ADVERTISEMENT

ಸ್ಮಶಾನ ಯಾತ್ರೆ ಮಾಡಿಸುವುದಷ್ಟೆ ಬಾಕಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 13:11 IST
Last Updated 3 ಸೆಪ್ಟೆಂಬರ್ 2021, 13:11 IST
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.31ರ ಸಾಯಿ ಕನ್ನಡ ಶಾಲೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ ಚಲಾಯಿಸಿ ಹೊರ ಬಂದರು. ಪುತ್ರ ಮೃಣಾಲ್ ಹೆಬ್ಬಾಳಕರ ಮತ್ತು ಮುಖಂಡ ಯುವರಾಜ ಕದಂ ಇದ್ದಾರೆ
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.31ರ ಸಾಯಿ ಕನ್ನಡ ಶಾಲೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ ಚಲಾಯಿಸಿ ಹೊರ ಬಂದರು. ಪುತ್ರ ಮೃಣಾಲ್ ಹೆಬ್ಬಾಳಕರ ಮತ್ತು ಮುಖಂಡ ಯುವರಾಜ ಕದಂ ಇದ್ದಾರೆ   

ಬೆಳಗಾವಿ: ‘ಶವಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ಬಿಜೆಪಿಯವರು ಮಹಾನಗರಪಾಲಿಕೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಗಂಗಾ ಯಾತ್ರೆ ಮಾಡಿಸಿದ್ದಾರೆ. ಇನ್ನು ಸ್ಮಶಾನ ಯಾತ್ರೆ ಮಾಡಿಸುವುದೊಂದು ಬಾಕಿ ಇದೆ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟೀಕಿಸಿದರು.

ಇಲ್ಲಿನ ಮಹಾನಗರಪಾಲಿಕೆಯ ವಾರ್ಡ್ ನಂ.31ರ ಸಾಯಿ ಕನ್ನಡ ಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ನಗರಪಾಲಿಕೆ ಆಯುಕ್ತರ ಮನೆಯ ಮುಂದೆ ಬಿಜೆಪಿ ಶಾಸಕರೇ ಕಸ ತಂದು ಚೆಲ್ಲುವಂತಹ ಪರಿಸ್ಥಿತಿ ಬರುತ್ತದೆ ಎಂದರೆ ಮಹಾನಗರ ಪಾಲಿಕೆಯ ಮೇಲೆ ಯಾರ ಹಿಡಿತವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನಗರದಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಆದರೆ, ಅವರಲ್ಲಿ ಒಬ್ಬರಾದ ಅಭಯ ಪಾಟೀಲ ಅವರೇ ಪಾಲಿಕೆ ಆಯುಕ್ತರ ಮನೆಯ ಮುಂದೆ ಕಸ ಚೆಲ್ಲುತ್ತಾರೆ ಎಂದರೆ ಪರಿಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆ ಹೇಗಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾವಿರ ಕೋಟಿ ರೂಪಾಯಿ ಯೋಜನೆ ಮೇಲೆ ಇದ್ದ ನಿರೀಕ್ಷೆ ಹುಸಿಯಾಗಿದೆ’ ಎಂದು ಹೇಳಿದರು.

‘ಜನರು ಅಗತ್ಯ ವಸ್ತುಗಳು, ತೈಲ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ನಂಬಿ ಮೋಸ ಹೋಗಿದ್ದಾರೆ. ಹಾಗಾಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುತ್ರ ಮೃಣಾಲ ಹೆಬ್ಬಾಳಕರ, ಮುಖಂಡರ ಯುವರಾಜ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.