ADVERTISEMENT

ಸಚಿವ ಬೈರತಿ ಬಸವರಾಜ ವಿರುದ್ಧ ಭೂಹಗರಣ ಆರೋಪ: ಸಂಧಾನ ಯತ್ನ– ಕಾಂಗ್ರೆಸ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 6:35 IST
Last Updated 17 ಡಿಸೆಂಬರ್ 2021, 6:35 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ‘ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಭೂಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನನ್ನ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಹೇಳಿದರು.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಇಂದು (ಶುಕ್ರವಾರ) ಬೆಳಿಗ್ಗೆ ಸಚಿವರೊಬ್ಬರು ನನ್ನನ್ನು ಭೇಟಿ ಮಾಡಿ ಈ ವಿಷಯದಲ್ಲಿ ಸಂಧಾನ ಮಾಡುವುದಕ್ಕೆ ಪ್ರಯತ್ನಿಸಿದರು. ಸಿದ್ದರಾಮಯ್ಯ ಜೊತೆಗೂ ಮಾತನಾಡಲು ಸುಧಾಕರ್‌ ಪ್ರಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ಮಾತನಾಡಿಲ್ಲ’ ಎಂದರು.

‘ಈ ಬಗ್ಗೆ ಗುರುವಾರ ಬೆಳಿಗ್ಗೆ ಸಭಾಪತಿ ಸಂಧಾನ ಮಾಡಿದ್ದರು. ಬೇರೆ ರೂಪದಲ್ಲಿ ವಿಷಯ ಪ್ರಸ್ತಾಪಿಸಿದರೆ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ಈ ಆರೋಪವನ್ನು ನ್ಯಾಯಾಲಯ ಕೂಡ ಎತ್ತಿ ಹಿಡಿದಿದೆ. ಇವತ್ತು (ಶುಕ್ರವಾರ) ವಿಧಾನಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡುತ್ತೇವೆ’ ಎಂದರು.

ADVERTISEMENT

‘ಬೈರತಿ ಬಸವರಾಜ್ ವಿರುದ್ಧ ಯಾರೂ ಷಡ್ಯಂತ್ರ ಮಾಡುತ್ತಿಲ್ಲ. ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಡಿ.ಕೆ. ಶಿವಕುಮಾರ್ ಮೇಲೆ ಯಾವ ಕೇಸೂ ಇಲ್ಲ. ಆದರೆ, ಬೈರತಿ ಬಸವರಾಜ್ ಮೇಲೆ ವಂಚನೆ ಕೇಸ್ ದಾಖಲಾಗಿದೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.