ADVERTISEMENT

ಕಾನೂನು ವಿಶ್ವವಿದ್ಯಾಲಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 11:37 IST
Last Updated 29 ನವೆಂಬರ್ 2021, 11:37 IST
ಬೆಳಗಾವಿಯಲ್ಲಿ ಕಾನೂನು ವಿಶ್ವವಿದ್ಯಾಲಯ ಕೈಗೊಂಡಿರುವ ಕೆಲವು ನಿರ್ಣಯಗಳಿಂದಾಗಿ ನಮಗೆ ತೊಂದರೆಯಾಗಿದೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯಲ್ಲಿ ಕಾನೂನು ವಿಶ್ವವಿದ್ಯಾಲಯ ಕೈಗೊಂಡಿರುವ ಕೆಲವು ನಿರ್ಣಯಗಳಿಂದಾಗಿ ನಮಗೆ ತೊಂದರೆಯಾಗಿದೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ‘ರಾಜ್ಯ ಕಾನೂನು ವಿಶ್ವವಿದ್ಯಾಲಯ ಕೈಗೊಂಡಿರುವ ಕೆಲವು ನಿರ್ಣಯಗಳಿಂದಾಗಿ ನಮಗೆ ತೊಂದರೆಯಾಗಿದೆ’ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಸೆಮಿಸ್ಟರ್‌ ಪರೀಕ್ಷೆಗಳ ಅನಿರ್ದಿಷ್ಟತೆ, ಶೈಕ್ಷಣಿಕ ವರ್ಷದ ಬಗೆಗಿನ ಗೊಂದಲ ಹಾಗೂ ಮೌಲ್ಯಮಾಪನದಲ್ಲಿನ ಲೋಪದೋಷಗಳಿಂದ ನಮಗೆ ಸಮಸ್ಯೆಯಾಗಿದೆ. ಶಿಕ್ಷಣದ ಹಕ್ಕಿನ ಸಮಗ್ರತೆ ಕಾಪಾಡಿಕೊಳ್ಳಲು ನಮ್ಮ ಜೀವನದ ಹಕ್ಕಿನ ಸಮಗ್ರತೆಯನ್ನು ಕಳೆದುಕೊಳ್ಳಬೇಕೇ?’ ಎಂದು ಕೇಳಿದರು.

ADVERTISEMENT

‘ವಿಶ್ವವಿದ್ಯಾಲಯವು ಪರೀಕ್ಷೆ ಹಾಗೂ ಶೈಕ್ಷಣಿಕ ವರ್ಷದ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ. ದೇಶದ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಧ್ಯಂತರ ಪರೀಕ್ಷೆಗಳು ಹಾಗೂ ಸಂಶೋಧನೆಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಿವೆ. ಸೂಚಿತ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸುತ್ತಿವೆ. ಆದರೆ, ಕಾನೂನು ವಿ.ವಿ. ಕುಲಪತಿ ಮಾತ್ರ ಈ ಕ್ರಮ ವಹಿಸಿಲ್ಲ. ಅಲ್ಲದೇ, ಅಸಮಂಜಸ ಹಾಗೂ ಅವೈಜ್ಞಾನಿಕ ನಿರ್ಧಾರಗಳಿಂದ ಹಿಂದಿನ ಸೆಮಿಸ್ಟರ್‌ನಲ್ಲೇ ಉಳಿಯುವಂತಾಗಿದ್ದು, ನಮ್ಮ ಭವಿಷ್ಯವನ್ನು ಅತಂತ್ರಗೊಳಿಸಿದೆ’ ಎಂದು ತಿಳಿಸಿದರು.

‘ವೇಳಾಪಟ್ಟಿಯನ್ನು ಪದೇ ಪದೇ ಮುಂದೂಡುವುದು, ನಿರ್ಧರಿಸಿದ ಸಮಯದಲ್ಲಿ ಪರೀಕ್ಷೆ ನಡೆಸದಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದ’ ಎಂದರು.

‘ಮುಂದಿನ ಶೈಕ್ಷಣಿಕ ವರ್ಷವನ್ನು ತಕ್ಷಣವೇ ಆರಂಭಿಸಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಂತೋಷ ಬಿರಾದಾರ, ಕೃಷ್ಣಗೌಡ, ಹಯಾಳಪ್ಪ, ನಾರಾಯಣ ಬಾನಿ, ಶರಣು ಪಾಟಲ ಹಾಗೂ ಅಶೋಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.