ADVERTISEMENT

ಕೋವಿಡ್ ನಿಯಮ ಸಡಿಲಿಕೆಗೆ ಚಿಂತನೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 15:37 IST
Last Updated 15 ಜನವರಿ 2021, 15:37 IST
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶಕ್ಕೆ ನಡೆದಿರುವ ಸಿದ್ಧತೆಯನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಕ್ರವಾರ ವೀಕ್ಷಿಸಿದರು. ಸಚಿವ ಶ್ರೀಮಂತ ಪಾಟೀಲ ಇದ್ದಾರೆ
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶಕ್ಕೆ ನಡೆದಿರುವ ಸಿದ್ಧತೆಯನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಕ್ರವಾರ ವೀಕ್ಷಿಸಿದರು. ಸಚಿವ ಶ್ರೀಮಂತ ಪಾಟೀಲ ಇದ್ದಾರೆ   

ಬೆಳಗಾವಿ: ‘ರಾಜ್ಯದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ, ಕೋವಿಡ್ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡುವ ಚಿಂತನೆ ನಡೆಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿರುವ ಜನಸೇವಕ ಸಮಾವೇಶ ಸಮಾರೋಪಕ್ಕೆ ನಡೆದಿರುವ ಸಿದ್ಧತೆಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘200ಕ್ಕಿಂತ ಹೆಚ್ಚು ಜನರು ಸಭೆ–ಸಮಾರಂಭಗಳಲ್ಲಿ ಸೇರಬಾರದು ಎಂಬ ನಿಯಮವನ್ನು ಬಿಜೆಪಿಯವರು ಉಲ್ಲಂಘಿಸುತ್ತಿದ್ದಾರೆ’ ಎಂಬ ವಿರೋಧ ಪಕ್ಷದವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಹಾರ ಸೇರಿದಂತೆ ಅನೇಕ ಕಡೆ ಚುನಾವಣೆಗಳಾದ ಸಂದರ್ಭಗಳಲ್ಲಿ ಎಲ್ಲ ಪಕ್ಷದವರೂ ಸಾಕಷ್ಟು ಜನರನ್ನು ಸೇರಿಸಿ ಪ್ರಚಾರ ಮಾಡಿದ್ದಾರೆ. ‍ಪ್ರಸ್ತುತ ಕೋವಿಡ್ ಬಹಳಷ್ಟು ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಭಯದ ವಾತಾವರಣವಿಲ್ಲ. ಆದರೂ ಎಲ್ಲರೂ ಮಾಸ್ಕ್ ಹಾಕಿಕೊಂಡು ಬರುವಂತೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ದೇವಸ್ಥಾನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದರೆ ಮತ್ತು ಜನದಟ್ಟಣೆ ಸೇರುವುದರಿಂದ ಕೋವಿಡ್ ಹರಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಸಮಾರಂಭಗಳಿಗೂ ದೇವಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕೋವಿಡ್ ಹರಡದಂತೆ ಭೋಜನದ ವ್ಯವಸ್ಥೆ ಮಾಡುತ್ತೇವೆ’ ಎಂದರು.

ಸಚಿವ ಶ್ರೀಮಂತ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪಾಲ್ಗೊಂಡಿದ್ದರು.

ವೀಕ್ಷಿಸಿದ ಕತ್ತಿ:ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ಹಾಗೂ ಶಾಸಕರು, ಮಂತ್ರಿಗಳಿಗೆ ಹಾಕಿರುವ ಪೆಂಡಾಲ್‌ ವ್ಯವಸ್ಥೆಯನ್ನು ಸಚಿವ ಉಮೇಶ ಕತ್ತಿ ವೀಕ್ಷಿಸಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಈರಣ್ಣ ಅಂಗಡಿ, ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ದನಗೌಡರ, ವಕ್ತಾರ ಹನುಮಂತ ಕೊಂಗಾಲಿ, ವೀರಭದ್ರ ಪೂಜೇರ, ನಾಗನಗೌಡ ದೊಡಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.