ADVERTISEMENT

ಒಳ್ಳೆಯ ಕೆಲಸವಾಗಲೆಂದು ಖಾತೆ ಬದಲಾವಣೆ: ಸವದಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 14:29 IST
Last Updated 14 ಅಕ್ಟೋಬರ್ 2020, 14:29 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ಖಾತೆ ಬದಲಾವಣೆ ಆದಾಕ್ಷಣ ಸಚಿವ ಬಿ.ಶ್ರೀರಾಮುಲು ಅಸಮರ್ಥರು ಎಂದರ್ಥವಲ್ಲ. ಒಳ್ಳೆಯ ಕೆಲಸ ಆಗಬೇಕೆಂದು ಈ ತೀರ್ಮಾನ ಮಾಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ವರಿಷ್ಠರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟದ ಕೆಲವು ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ. ಖಾತೆಗಳನ್ನು ಅದಲು–ಬದಲು ಮಾಡುವ ಅಧಿಕಾರ ಅವರಿಗಿದೆ. ಈ ಬಗ್ಗೆ ಕಾಂಗ್ರೆಸ್‌ನವರೇಕೆ ತಲೆಕೆಡಿಸಿಕೊಳ್ಳಬೇಕು?’ ಎಂದು ಕೇಳಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಹರುಳಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಎರಡು ವರ್ಷಗಳವರೆಗೆ ಶಿವಕುಮಾರ್‌ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಹಾಗಾದರೆ ಅವರು ಅಸಮರ್ಥರು ಎನ್ನುವ ಕಾರಣಕ್ಕೆ ಬಿಟ್ಟಿದ್ದರೇ? ಕೆಲವು ಸನ್ನಿವೇಶದಲ್ಲಿ ಖಾತೆ ಬದಲಾವಣೆ ಮಾಡಬೇಕಾಗುತ್ತದೆ’ ಎಂದರು.

ADVERTISEMENT

‘ಉಪ ಚುನಾವಣೆಗಳಲ್ಲಿ ಜನರು ಆಡಳಿತ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದು ಸಾಮಾನ್ಯ. ಕಾರ್ಯಕರ್ತರ ದೊಡ್ಡ ಪಡೆಯೇ ನಮ್ಮಲ್ಲಿದೆ. ಮತದಾರರ ಒಲವು ಬಿಜೆಪಿಯತ್ತ ಇದೆ. ಹೀಗಾಗಿ, ಆರ್‌.ಆರ್. ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ನಮಗೇ ಹೆಚ್ಚಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.