ADVERTISEMENT

ಗ್ರಾಮೀಣ ಪ್ರತಿ ಕುಟುಂಬಕ್ಕೂ ಯೋಜನೆ ರೂಪಿಸಿ: ಲಕ್ಷ್ಮೀ ಹೆಬ್ಬಾಳಕರ

ಗ್ರಾಮ ಮಟ್ಟದ ಸಿಬ್ಬಂದಿ, ವಿವಿಧ ಸಖಿಯರೊಂದಿಗೆ ಸಂವಾದ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:37 IST
Last Updated 10 ಫೆಬ್ರುವರಿ 2026, 2:37 IST
ಬೆಳಗಾವಿಯಲ್ಲಿ ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುಸ್ತಕ ಬರಹಗಾರರು, ಎಂಬಿಕೆ ಮತ್ತು ಎಲ್‌ಸಿಆರ್‌ಪಿ, ಕೃಷಿ ಸಖಿ ಮತ್ತು ಪಶು ಸಖಿಯರ ಜತೆಗೆ ಸಮಾಲೋಚನೆ ನಡೆಸಿದರು. ಚನ್ನರಾಜ ಹಟ್ಟಿಹೊಳಿ, ಇಒ ಯಶವಂತಕುಮಾರ್ ಪಾಲ್ಗೊಂಡರು
ಬೆಳಗಾವಿಯಲ್ಲಿ ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುಸ್ತಕ ಬರಹಗಾರರು, ಎಂಬಿಕೆ ಮತ್ತು ಎಲ್‌ಸಿಆರ್‌ಪಿ, ಕೃಷಿ ಸಖಿ ಮತ್ತು ಪಶು ಸಖಿಯರ ಜತೆಗೆ ಸಮಾಲೋಚನೆ ನಡೆಸಿದರು. ಚನ್ನರಾಜ ಹಟ್ಟಿಹೊಳಿ, ಇಒ ಯಶವಂತಕುಮಾರ್ ಪಾಲ್ಗೊಂಡರು   

ಬೆಳಗಾವಿ: ‘ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ಗ್ರಾಮೀಣಾಭಿವೃದ್ಧಿಯಲ್ಲಿ ನಂಬಿಕೆ ಇಟ್ಟುಕೊಂಡು ಬಂದಿದೆ. ಗ್ರಾಮ ಪಂಚಾಯಿತಿಗಳನ್ನು ಜಾರಿಗೊಳಿಸಿದ್ದು, ಕೃಷಿ ಸಹಾಯಕಿಯರು, ಪಶು ಸಹಾಯಕಿಯರನ್ನು ನೇಮಕ ಮಾಡಿದ್ದು, ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು ನಮ್ಮದೇ ಸರ್ಕಾರ. ಈಗಲೂ ಗ್ರಾಮೀಣ ಅಭಿವೃದ್ಧಿ ಆಗಬೇಕೆಂದರೆ ಮಹಿಳೆಯರ ಅಭಿವೃದ್ಧಿ ಆಗಬೇಕೆಂಬ ಚಿಂತನೆ ಮೂಲಕ ಮುನ್ನಡೆದಿದೆ. ನೀವು ಕರ್ತವ್ಯ ಅರಿತು ಕೆಲಸ ಮಾಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕರೆ ನೀಡಿದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರು, ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ, ಕೃಷಿ ಸಖಿ ಮತ್ತು ಪಶು ಸಖಿಯರ ಜತೆಗೆ, ನಗರದಲ್ಲಿ ಸೋಮವಾರ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.

‘ಈಗ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರವೇ. ಇವೆಲ್ಲದರ ಮೂಲ ಉದ್ದೇಶವೇ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ. ನೀವೆಲ್ಲ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಹಳ್ಳಿಗಳ ಪ್ರತಿ ಕುಟುಂಬಕ್ಕೂ ಯೋಜನೆ ಮುಟ್ಟಿಸಬೇಕು’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ತಾಲ್ಲೂಕು ಪಂಚಾಯಹಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ, ಕಾಡಾ ಅಧ್ಯಕ್ಷ ಯುವರಾಜ ಕದಂ, ಗ್ರಾಮೀಣ ಮುಖಂಡರಾದ ಮನೋಹರ್ ಬಾಂಡಗಿ, ಬಾಳು ದೇಸೂರಕರ್, ಸಿ.ಸಿ.ಪಾಟೀಲ, ಪಶು ಹಾಗೂ ಕೃಷಿ ಸಖಿಯರು ಉಪಸ್ಥಿತರಿದ್ದರು.

ಶಿವಾಜಿ ಆದರ್ಶ ಪಾಲಿಸಿ: ‘ನಾವು ಶಿವಾಜಿ ಮಹಾರಾಜರನ್ನು ಪೂಜಿಸುವ ಜೊತೆಗೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಖನಗಾಂವ ಕೆ.ಎಚ್. ಗ್ರಾಮದಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸ್ಥಳದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಧರ್ಮ, ಭಾಷೆ, ಜಾತಿ ಯಾವುದೂ ಅಡ್ಡಿಯಾಗದೇ ಜನರ ಸುರಕ್ಷತೆ, ಸ್ವಾಭಿಮಾನ ಮತ್ತು ಸ್ವರಾಜ್ಯ; ಇವು ಶಿವಾಜಿಯವರ ಆಡಳಿತದ ಮೂಲ ತತ್ವಗಳು. ನಾನು ಕೂಡ ಯಾವುದೇ ಭೇದ– ಭಾವವಿಲ್ಲದೆ ಜನರ ಸೇವೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ನಂತರ ‘ಅರಿಶಿನ– ಕುಂಕುಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಿವಮೂರ್ತಿ ದೇವರು ಅರಳಿಕಟ್ಟಿ, ಶ್ರೀಶೈಲ ಸ್ವಾಮಿಗಳು, ರಾಜು ಸುಳೇಭಾವಿ ಸಾಮಿಗಳು ಹಲವರು ಇದ್ದರು.

ಮಾಜಿ ಸೈನಿಕರ ಸಂಘಕ್ಕೆ ಜಾಗ ಮಂಜೂರು ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಬೆಳಗಾವಿಯಲ್ಲಿ ಸೋಮವಾರ ಮಾಜಿ ಸೈನಿಕರು ಹಾಗೂ ಕುಟುಂಬದವರು ಸನ್ಮಾನಿಸಿದರು

ಜಾಗ ಮಂಜೂರು: ಸಚಿವೆಗೆ ಸನ್ಮಾನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯ ಜೈ ಗಣೇಶ ಎಕ್ಸ್ ಸರ್ವಿಸ್ ಮ್ಯಾನ್ ಅಸೋಸಿಯೇಷನ್ (ಸರಸ್ವತಿ ನಗರ) ಕಟ್ಟಡ ನಿರ್ಮಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಜಾಗ ಮಂಜೂರು ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಅಸೋಸಿಯೇಷನ್ ಅಧ್ಯಕ್ಷ ಗಣಪತ್ ದೇಸಾಯಿ ಅವರ ನೇತೃತ್ವದ ಮಾಜಿ ಸೈನಿಕರು ಗೃಹ ಕಚೇರಿಗೆ ಆಗಮಿಸಿ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅನೇಕ ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಅಂಗನವಾಡಿ: ಸಚಿವೆ ಸಮಾಲೋಚನೆ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಮಕ್ಕಳ ಆರೋಗ್ಯ ಶಿಕ್ಷಣ ಸುಧಾರಣೆಗೆ ಸಲಹೆ– ಸೂಚನೆಗಳನ್ನು ನೀಡಿದರು. ಕಾರ್ಯಕರ್ತೆಯರ ಕುಂದು ಕೊರತೆಗಳನ್ನು ಆಲಿಸಿದ ಸಚಿವೆ ಸ್ಥಳೀಯಮಟ್ಟದ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ ಯುನಿಯನ್ ಲೀಡರ್ ಮಂದಾ ನಿಯೋಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.