ಸಿದ್ದರಾಮಯ್ಯ
ನಂದಗಡ (ಬೆಳಗಾವಿ ಜಿಲ್ಲೆ): ಮರಾಠಿಯಲ್ಲಿ ಭಾಷಣ ಮಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಕನ್ನಡ ಪಾಠ ಮಾಡಿದರು. ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡ ಕಲಿಯಲೇಬೇಕು ಎಂದೂ ಕನ್ನಡ ವಿರೋಧಿ ಎಂಇಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಸೋಮವಾರ ರಾಯಣ್ಣನ 'ವೀರಭೂಮಿ' ವಸ್ತು ಸಂಗ್ರಹಾಲಯ ಉದ್ಘಾಟಿಸಿ ಅವರು ಮಾತನಾಡಿದರು.
'ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯುವಂಥ ವಾತಾವರಣ ನಿರ್ಮಾಣ ಮಾಡಬೇಕು. ಯಾರು ಎಲ್ಲಿಂದಲೇ ಬಂದಿರಲಿ, ಎಲ್ಲೇ ಹೋಗಲಿ ಕನ್ನಡ ನೆಲದ ಹೆಸರು ಹೇಳುವ ಮುನ್ನ ಕನ್ನಡ ಕಲಿಯತಕ್ಕದ್ದು. ಅದನ್ನು ನಾವು ಅನಿವಾರ್ಯ ಮಾಡಬೇಕು. ಆಗ ಮಾತ್ರ ಕರ್ನಾಟಕ ಏಕೀಕರಣ ಮಾಡಿದ್ದಕ್ಕೆ ಸಾರ್ಥಕ ಆಗುತ್ತದೆ' ಎಂದರು.
ಇದಕ್ಕೂ ಮುನ್ನ ಅಧ್ಯಕ್ಷೀಯ ಭಾಷಣಕ್ಕೆ ನಿಂತ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮರಾಠಿಯಲ್ಲಿ ಮಾತು ಆರಂಭಿಸಿದರು. ಆಗ ಜನಸ್ತೋಮದಿಂದ ಕೂಗಾಟ, ಚೀರಾಟ ಆರಂಭವಾಯಿತು. 'ಕನ್ನಡ ಕನ್ನಡ' ಎಂದು ಜನ ಕೂಗಿದರು.
'ನನಗೆ ಕನ್ನಡ ಬರುವುದಿಲ್ಲ ಎಂಬುದು ನಿಮಗೆ ಗೊತ್ತು. ಸಿದ್ದರಾಮಯ್ಯ ಅವರಿಗೆ ಮರಾಠಿ ಅರ್ಥವಾಗುವುದಿಲ್ಲ ಎಂಬುದು ನನಗೂ ಗೊತ್ತು. ನನ್ನ ಬೇಡಿಕೆಗಳನ್ನು ಕನ್ನಡದಲ್ಲೇ ಬರೆಸಿ ತಂದಿದ್ದೇನೆ. ಖಾನಾಪುರದಲ್ಲಿ ಕನ್ನಡ- ಮರಾಠಿ ಎಂಬ ಭೇದವಿಲ್ಲ. ಎಲ್ಲರೂ ಚೆನ್ನಾಗಿದ್ದೇವೆ' ಎಂದು ಮರಾಠಿಯಲ್ಲೇ ಟಾಂಗ್ ನೀಡಿದರು. ಗಲಾಟೆ ಜೋರಾದಾಗ ಅವರು ಕನ್ನಡದಲ್ಲಿ ಮನವಿ ಓದಿದರು.
ಬಳಿಕ ಉದ್ಘಾಟನಾ ಭಾಷಣ ಮಾಡಿದ ಸಿದ್ದರಾಮಯ್ಯ, 'ಏನಯ್ಯ ವಿಠ್ಠಲ ಕನ್ನಡ ಅರ್ಥವಾಗುತ್ತದೆಯೇ?' ಎಂದು ಕೇಳಿದರು.
'ಅರ್ಥವಾಗುತ್ತದೆ ಸರ್' ಎಂದು ಶಾಸಕ ಪ್ರತಿಕ್ರಿಯಿಸಿದರು.
'ಇಲ್ಲಿರುವವರು ಮಾತ್ರವಲ್ಲ; ನೀವು ಯಾರು ಎಲ್ಲೇ ಇರಿ; ಕನ್ನಡದ ಅನ್ನ ಉಂಡ ಮೇಲೆ ಕನ್ನಡ ಕಲಿಯಿರಿ' ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರಿಗೂ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.