ADVERTISEMENT

ವಿಧಾನಪರಿಷತ್ ಚುನಾವಣೆ: 1 ಸ್ಥಾನಕ್ಕಷ್ಟೇ ಕಾಂಗ್ರೆಸ್‌ ಸ್ಪರ್ಧೆ, ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:39 IST
Last Updated 6 ಅಕ್ಟೋಬರ್ 2021, 12:39 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಜಿಲ್ಲೆಯಲ್ಲಿ ಮುಂಬರುವ ವಿಧಾನಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 2 ವಿಧಾನ ಪರಿಷತ್ ಸ್ಥಾನಗಳಿವೆ. ಇಬ್ಬರು ಸ್ಪರ್ಧೆ ಮಾಡಿದರೆ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಆಗ ಗೆಲ್ಲುವುದು ಕಷ್ಟವಾಗುತ್ತದೆ. ಹೀಗಾಗಿ, ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮದೇ ಆದ ಮತ ಬ್ಯಾಂಕ್ ಇದೆ. ಈಗಾಗಲೇ ಐವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ’ ಎಂದು ಹೇಳಿದರು.

‘ಒಂದು ಕಡೆಯಲ್ಲಿ ಗೆಲ್ಲುವುದಕ್ಕೆ ಮಾತ್ರವೇ ನಾವು ಸಮರ್ಥವಿದ್ದೇವೆ. ಅಲ್ಲೇ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕಳೆದ ಬಾರಿಯ ಚುನಾವಣೆಯಲ್ಲಿ ನಿಮ್ಮ ಪಕ್ಷದವರೇ ನಿಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದರು’ ಎಂಬ ಪ್ರಶ್ನೆಗೆ, ‘ಸೋಲಿಸುವ ತಂಡವೀಗ ಈಗಾಗಲೇ ನಮ್ಮ ಪಕ್ಷದಿಂದ ಹೊರ ಹೋಗಿದೆ. ಹೀಗಾಗಿ, ಈಗ ನಾವು ಆತಂಕಪಡುವ ಅಗತ್ಯವಿಲ್ಲ’ ಎಂದು ಪರೋಕ್ಷವಾಗಿ ಪಕ್ಷ ತೊರೆದಿರುವವರ ಬಗ್ಗೆ ವ್ಯಂಗ್ಯವಾಡಿದರು.

ಪೈಪೋಟಿ ಆರೋಗ್ಯಕರವಾಗಿರಬೇಕು:

‘ವಿರೋಧಿಗಳು ಇರಬೇಕು. ಆಗ ಮಾತ್ರ ನಾವು ಎಚ್ಚರಿಕೆಯಿಂದ ಇರುತ್ತೇವೆ. ಆದರೆ, ಹೇಳಿಕೆಗಳು ಸರಿಯಾದ ದಾಟಿಯಲ್ಲಿ ಇರಬೇಕು. ಜನ ಒಪ್ಪುವಂತಿರಬೇಕು. ಮೈಕ್ ಇದೆ ಎಂದು ಕೊಲ್ಹಾಪುರ, ಪಂಢರಪುರ, ವಿಜಯಪುರ ಸುತ್ತಿ ಬೆಳಗಾವಿಯಲ್ಲಿ ಬಂದು ಹೇಳಿಕೆ ನೀಡುವುದಲ್ಲ. ಪೈಪೋಟಿ ಆರೋಗ್ಯಕರವಾಗಿರಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಹಗುರವಾಗಿ ಮಾತನಾಡಿರುವ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲಗೆ ತಿರುಗೇಟು ನೀಡಿದರು.

‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಇಬ್ಬರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಚುನಾವಣೆಗೂ ಮೊದಲೇ ತಮ್ಮ ಚಡ್ಡಿಯನ್ನು ಗಟ್ಟಿಯಾಗಿ ಉಳಿಸಿಕೊಳ್ಳುವುದಕ್ಕಾಗಿ ಈಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಆ ಚಡ್ಡಿ ಹರಿದು ಹೋಗುತ್ತದೆ. ಆದ್ದರಿಂದ 2 ವರ್ಷಕ್ಕೂ ಮೊದಲ ಸಿದ್ಧವಾಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಕ್ಕ ಪಾಠ ಕಲಿಸುತ್ತಾರೆ:

‘ಉತ್ತರ ಪ್ರದೇಶದಲ್ಲಿ ಕೊಲೆ ಪ್ರಕರಣಗಳು ಹೊಸತಲ್ಲ. ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಂಬರುವ ಚುನಾವಣೆಯಲ್ಲಿ ಜನರೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಅರ್ಬಾಜ್ ಎನ್ನುವ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗುವುದು. ಸತ್ಯಾಸತ್ಯತೆಯನ್ನು ಪೊಲೀಸರು ಬಯಲಿಗೆ ತರಬೇಕು. ತ್ವರಿತವಾಗಿ ತನಿಖೆ ನಡೆಸುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುವುದು’ ಎಂದರು.

ಪಕ್ಷದ ಗ್ರಾಮೀಣ ಜಿಲ್ಲಾ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮನ್ನವರ, ಮುಖಂಡ ಮನಸೂರ ಸೈಯದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.