ADVERTISEMENT

ಪತ್ತೆಯಾಗದ ಚಿರತೆ: ಮೂರನೇ ದಿನ ಮುಂದುವರಿದ ಕಾರ್ಯಾಚರಣೆ 

ದಾಂಡೇಲಿಯಿಂದ ಬರಲಿವೆ ನಾಲ್ಕು ಬೋನು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 10:40 IST
Last Updated 7 ಆಗಸ್ಟ್ 2022, 10:40 IST
   

ಬೆಳಗಾವಿ: ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ನುಗ್ಗಿದ ಚಿರತೆ ಭಾನುವಾರವೂ ಸೆರೆ ಸಿಕ್ಕಿಲ್ಲ. ಅದರ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈ ಚಿರತೆ ಪೊದೆ ಸೇರಿಕೊಂಡಿದ್ದು ಜಾಧವ ನಗರದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಜಾಗದಲ್ಲಿ ಬೋನು ಇಟ್ಟು, ಅದರಲ್ಲಿ ನಾಯಿ ಕಟ್ಟಲಾಗಿತ್ತು. ಈಗ ಗಾಲ್ಫ್‌ ಮೈದಾನದಲ್ಲಿ ಚಿರತೆ ಕಾಣಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರಿಂದ, ಸಿಬ್ಬಂದಿ ಅತ್ತ ದೌಡಾಯಿಸಿದ್ದಾರೆ. ಜಾಧವ ನಗರದಲ್ಲಿ ಇಡಲಾಗಿದ್ದ ಬೋನು, ಗಾಲ್ಫ್‌ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಸ್ಥಳೀಯರಲ್ಲಿ ಆತಂಕ: ಜಾಧವ ನಗರ ಹಾಗೂ ಸುತ್ತಲಿನ ಪ್ರದೇಶಗಳ ಜನರಿಗೆ ಚಿರತೆ ಭಯ ಕಾಡುತ್ತಿದೆ. ಹಾಗಾಗಿ ಬಹುತೇಕರು ಮನೆಯಿಂದ ಹೊರಬರುತ್ತಿಲ್ಲ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುತ್ತಿದ್ದವರೂ ಇತ್ತ ಸುಳಿಯುತ್ತಿಲ್ಲ. ಮೂರು ದಿನಗಳಾದರೂ ಚಿರತೆ ಪತ್ತೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

‘ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸುತ್ತಿಲ್ಲ’ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಾಲ್ಫ್‌ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಮಾರ್ಗದ ಮುಖ್ಯರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

‘ಗಾಲ್ಫ್‌ ಮೈದಾನದಲ್ಲಿ ಚಿರತೆ ಕಾಣಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹಾಗಾಗಿ ಇಲ್ಲಿಗೆ ಬೋನು ಸ್ಥಳಾಂತರಿಸಿ, 50 ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದಲೂ ನಾಲ್ಕು ಬೋನು ತರಿಸಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿರತೆ ಪತ್ತೆಯಾಗುವವರೆಗೆ ಜನರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಕಾರ್ಯಾಚರಣೆ ನಡೆಸುತ್ತಿರುವವರಿಗೆ ಸಹಕರಿಸಬೇಕು. ಪೊದೆಗಳು ಇರುವ ಕಡೆ ಒಬ್ಬರೇ ಓಡಾಡಬಾರದು. ವಾಯುವಿಹಾರಕ್ಕೆ ಬರಬಾರದು’ ಎಂದು ಕೋರಿದರು.

ಕಟ್ಟಡ ಕಾರ್ಮಿಕ ಸಿದರಾಯಿ ನಿಲಜಕರ್‌ ಎನ್ನುವವರ ಮೇಲೆ ಈ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಇದರಿಂದ ಬೆಚ್ಚಿ ಬಿದ್ದ ಅವರ ತಾಯಿ ಶಾಂತಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.