ADVERTISEMENT

‘ವಚನ ದರ್ಶನ’ ಪುಸ್ತಕ ಮುಟ್ಟುಗೋಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 13:41 IST
Last Updated 5 ಸೆಪ್ಟೆಂಬರ್ 2024, 13:41 IST
 ನಿವೇದಿತಾ
 ನಿವೇದಿತಾ   

ಬೆಳಗಾವಿ: ‘ಗದಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಸಂಪಾದಕತ್ವದಲ್ಲಿ ಹೊರತಂದ ‘ವಚನ ದರ್ಶನ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವ ತಿರುಚಲಾಗಿದೆ. ರಾಜ್ಯ ಸರ್ಕಾರ ಈ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕು’ ಎಂದು ರಾಮದುರ್ಗ ತಾಲ್ಲೂಕಿನ ನಾಗನೂರಿನ ಗುರುಬಸವ ಮಠದ ಕಾರ್ಯದರ್ಶಿ ಡಿ.ಬಿ.ನಿವೇದಿತಾ ಒತ್ತಾಯಿಸಿದರು.

‘ಬ್ರಾಹ್ಮಣರಾಗಿದ್ದ ಬಸವಣ್ಣ ವೈದಿಕ ಧರ್ಮ ಒಪ್ಪಿದ್ದರು. ಹಿಂದೂ ಧರ್ಮದ ಸುಧಾರಣೆಗೆ ಶ್ರಮಿಸಿದ್ದರು ಎಂಬ ಅರ್ಥದಲ್ಲಿ ಈ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಇದು ಶುದ್ಧ ಸುಳ್ಳು. ಅವರು ಎಂದಿಗೂ ಹಿಂದೂ ಧರ್ಮ ಮತ್ತು ಬ್ರಾಹ್ಮಣತ್ವ ಒಪ್ಪಲೇ ಇಲ್ಲ. ತಾನು ಬ್ರಾಹ್ಮಣ ಎಂದೂ ಹೇಳಿಕೊಂಡಿಲ್ಲ. ಆದರೆ, ಈ ಪುಸ್ತಕದ ಮೂಲಕ ಲಿಂಗಾಯತರ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಕ್ರಮವಾಗಬೇಕು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕಂದಾಚಾರ, ಲಿಂಗ ಅಸಮಾನತೆ ವಿರುದ್ಧ ಸಿಡಿದೆದ್ದು, ವೈದಿಕ ಧರ್ಮದಿಂದ ಹೊರಬಂದವರು ಬಸವಣ್ಣ. ವೈದಿಕತೆ ವಿರುದ್ಧ ಹುಟ್ಟಿಕೊಂಡಿರುವುದೇ ಲಿಂಗಾಯತ ಧರ್ಮ. ಬಸವಣ್ಣನವರ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಅವರ ವಚನಗಳೇ ಹೇಳುತ್ತವೆ. ಎಲ್ಲ ಶರಣರು ತಮ್ಮ ವಚನಗಳಲ್ಲಿ ವೈದಿಕತೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಆದರೆ, ಕೆಲವರು ಈ ಪುಸ್ತಕದ ಮೂಲಕ ಲಿಂಗಾಯತವನ್ನು ಹಿಂದೂ ಧರ್ಮದ ಭಾಗ ಮಾಡಲು ಹೊರಟಿದ್ದಾರೆ’ ಎಂದರು.

ADVERTISEMENT

‘ಲಿಂಗಾಯತ ಎಂಬುದು ವೈಚಾರಿಕತೆ ಹೊಂದಿರುವ ಧರ್ಮ. ಇದರಿಂದ ತಮ್ಮ ಅಸ್ತಿತ್ವ ಉಳಿಯದು ಎನ್ನುವ ಕಾರಣಕ್ಕೆ, ಕೆಲವರು ಈ ಪುಸ್ತಕ ಪ್ರಕಟಿಸಿದ್ದಾರೆ. ಆದರೆ, ಬಸವಣ್ಣನವರ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.