ಕಡತ
(ಸಾಂದರ್ಭಿಕ ಚಿತ್ರ)
ಬೆಳಗಾವಿ: ‘ರಾಜ್ಯದಲ್ಲಿ ಸೆ.22ರಿಂದ ಆರಂಭವಾಗುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿ ಕಾಲಂನಲ್ಲಿ ತಮ್ಮ ಒಳಪಂಗಡದ ಹೆಸರು ಬರೆಯಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆ ಹೆಸರಿನಲ್ಲಿ ಈಗ ಜಾತಿಗಣತಿ ನಡೆಯುತ್ತಿದೆ. ಹಾಗಾಗಿ ಲಿಂಗಾಯತರು ಧರ್ಮದ ಕಾಲಂ 8ರಲ್ಲಿನ ಕ್ರಮಾಂಕ 11ರಲ್ಲಿ(ಇತರೆ) ಲಿಂಗಾಯತ ಎಂದೇ ನಮೂದಿಸಬೇಕು. ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಎಲ್ಲ ಬಸವಪರ ಸಂಘಟನೆಗಳು ಈ ನಿರ್ಣಯ ತೆಗೆದುಕೊಂಡಿವೆ’ ಎಂದರು.
‘ವಿವಿಧ ಒಳಪಂಗಡದವರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿದರೆ, ಮೀಸಲಾತಿ ಸೌಲಭ್ಯಕ್ಕೆ ಯಾವ ತೊಂದರೆಯಾಗದು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸಹ ಇದೆ. ರಾಜ್ಯ ಸರ್ಕಾರವು 2018ರ ಮಾರ್ಚ್‌ನಲ್ಲೇ ಲಿಂಗಾಯತವನ್ನು ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಧರ್ಮವೆಂದು ಘೋಷಿಸಿ ಕೇಂದ್ರಕ್ಕೆ ವರದಿ ಕಳುಹಿಸಿದೆ. ಅಲ್ಲಿ ಅನುಮೋದನೆ ಸಿಕ್ಕರೆ ಇದು ಜಾರಿಯಾಗುತ್ತದೆ’ ಎಂದು ಹೇಳಿದರು.
‘ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿ ಪಟ್ಟಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಸರ್ಕಾರ ಇದನ್ನು ಸರಿಪಡಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ಕೇಂದ್ರ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದಂತೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಅಶೋಕ ಮಳಗಲಿ, ಪ್ರವೀಣ ಚಿಕಲಿ, ಸಿ.ಎಂ.ಬೂದಿಹಾಳ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.