ADVERTISEMENT

ಲಾಕ್‌ಡೌನ್: ಕೃಷಿ ತರಬೇತಿಗೆ ಬಂದವರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 15:07 IST
Last Updated 29 ಮಾರ್ಚ್ 2020, 15:07 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಉಗರಖೋಡ ಬಳಿ ಭಾನುವಾರ ಬೆಳಿಗ್ಗೆ ಆಶ್ರಯ ಪಡೆದಿದ್ದ ಯುವಕರು
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಉಗರಖೋಡ ಬಳಿ ಭಾನುವಾರ ಬೆಳಿಗ್ಗೆ ಆಶ್ರಯ ಪಡೆದಿದ್ದ ಯುವಕರು   

ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬಳಿಯ ಅರೆ ಸರ್ಕಾರಿ ಸಂಸ್ಥೆಯೊಂದರಲ್ಲಿ ಸಾವಯವ ಕೃಷಿಯಲ್ಲಿ ತರಬೇತಿ ಪಡೆಯಲು ಬಂದಿದ್ದ ಮೈಸೂರು, ಮಂಡ್ಯ ಭಾಗದ 24 ಯುವಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತರಬೇತಿ ಸಂಸ್ಥೆ ಇರುವ ಸಂಕೇಶ್ವರದಿಂದ ಸಾರಿಗೆ ಅನುಕೂಲವಿಲ್ಲದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ 100 ಕಿ.ಮೀ. ನಡೆದುಕೊಂಡು ಬಂದು ಭಾನುವಾರ ಕಿತ್ತೂರು ಸಮೀಪದ ಉಗರಖೋಡ ಬಳಿಯ ಹೊಲವೊಂದರಲ್ಲಿ ಆಶ್ರಯ ಪಡೆದಿದ್ದರು.

ಯುವಕರ ಗುಂಪು ಹೊರಟಿರುವುದನ್ನು ಕಂಡ ಗ್ರಾಮದ ಡಾ.ಎಸ್.ಪಿ. ಹಿರೇಮಠ ಅವರು ವಿಚಾರಿಸಿದಾಗ, ತರಬೇತಿ ಕೇಂದ್ರಕ್ಕೆ ಬಂದಿರುವ ವಿಷಯ ತಿಳಿಸಿದ್ದಾರೆ. ಆಗಿರುವ ತೊಂದರೆ ವಿವರಿಸಿದ್ದಾರೆ. ಮನಕರಗಿದ ಅವರು, ಅಲ್ಲಿಯೇ ಅವರಿಗೆ ಮುಂಜಾನೆ ಉಪಹಾರದ ವ್ಯವಸ್ಥೆ ಮಾಡಿ ತಂಗಲು ಅವಕಾಶ ನೀಡಿದರು.

ADVERTISEMENT

ಸುದ್ದಿ ತಿಳಿದು ಗ್ರಾಮ ಪಂಚಾಯಿತಿ ನೌಕರರು ಅಲ್ಲಿಗೆ ಬಂದು ಮಾಹಿತಿ ಪಡೆದರು.

‘ವರ್ಷದ ತರಬೇತಿಗಾಗಿ ಐದು ತಿಂಗಳ ಹಿಂದೆ ಸಂಕೇಶ್ವರಕ್ಕೆ ಬಂದಿದ್ದೆವು. ಲಾಕ್‌ ಡೌನ್‌ನಿಂದಾಗಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದ ಸಂಸ್ಥೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಲಾಯಿತು. ರೂಮ್ ಬಾಡಿಗೆಗೆ ಪಡೆದಿದ್ದ ನಮಗೆ ಊಟ, ತಿಂಡಿಗೂ ಬಹಳ ತೊಂದರೆಯಾಯಿತು. ಸಮಸ್ಯೆಗೆ ನಿರ್ದಿಷ್ಟ ಪರಿಹಾರವೂ ದೊರೆಯಲಿಲ್ಲ. ಹೀಗಾಗಿ ನಡೆದುಕೊಂಡು ಊರಿಗೆ ಹೋಗೋಣವೆಂದು ನಿರ್ಧರಿಸಿ ಇಲ್ಲಿಯವರೆಗೆ ಬಂದಿದ್ದೇವೆ’ ಎಂದು ಮೈಸೂರಿನ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಾಹ್ನದ ನಂತರ, ಅದೇ ದಾರಿಯಲ್ಲಿ ಹೋಗುತ್ತಿದ್ದ ಲಾರಿಯಲ್ಲಿ ಅವರು ಹೋದರು ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ರಾಮನಗರ, ಶಿರಸಿ, ದಾವಣಗೆರೆ ಯುವಕರೂ ಈ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.