ಹುಕ್ಕೇರಿ: ‘ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಗೆದ್ದ ನಂತರ ನಮ್ಮ ಜವಾಬ್ದಾರಿಯೂ ಹೆಚ್ಚಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ 30 ವರ್ಷಗಳಿಂದ ನಾವು ಜನರ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಪ್ರಿಯಂಕಾ ಜಾರಕಿಹೊಳಿ ಗೆದ್ದ ಮೇಲೆ ಇನ್ನಷ್ಟು ನಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಲಿದೆ’ ಎಂದು ತಿಳಿಸಿದರು.
‘ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸ ನಮಗಿದೆ. ಆದರೂ ಫಲಿತಾಂಶ ಬರುವವರೆಗೂ ನಾವು ಕಾಯಬೇಕು. ಗೆದ್ದರೆ ಏಂಟು ವಿಧಾನಸಭೆ ಕ್ಷೇತ್ರದ ಮುಖಂಡರು, ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸವನ್ನು ಮಾಡಬೇಕಾಗುತ್ತದೆ’ ಎಂದರು.
‘ಈ ಲೋಕಸಭೆ ಚುನಾವಣೆಯಲ್ಲಿ ಬರೀ ಪ್ರಧಾನಿ ಮೋದಿ ಅಷ್ಟೇ ಬೇಡ. ಧರ್ಮದ ಆಧಾರಿತ ರಾಜಕೀಯ ಬೇಡ ಎಂದು ಎಲ್ಲರೂ ನಿರ್ಧರಿಸಿದ್ದರು. ಅಭಿವೃದ್ಧಿ ಕೆಲಸ ಮಾಡುವವರನ್ನು ಬೆಂಬಲಿಸಬೇಕೆಂದು ಎಲ್ಲರ ಅಭಿಪ್ರಾಯವು ಆಗಿತ್ತು. ಈ ಕೂಗು ಪ್ರಿಯಂಕಾಗೆ ಟಿಕೆಟ್ ಸಿಕ್ಕ ಬಳಿಕ ಹೆಚ್ಚಾಯಿತು. ಈ ಚುನಾವಣೆಯಲ್ಲಿ ಬೇರೆ ಪಕ್ಷದವರು ನಮ್ಮನ್ನು ಬೆಂಬಲಿಸಿದ್ದು ವಿಶೇಷವಾಗಿದೆ’ ಎಂದು ಹೇಳಿದರು.
ಇದೇ ವೇಳೆ ಸಚಿವರು ಸಾರ್ವಜನಿಕರ, ಕಾರ್ಯಕರ್ತರ ಅಹವಾಲನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ, ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮಹಾಂತೇಶ ಮಗದುಮ್ ಸೇರಿದಂತೆ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.